Tuesday, 22nd October 2019

ರೋಹಿತ್, ರಾಹುಲ್ ಭರ್ಜರಿ ಶತಕ – ಲಂಕಾ ವಿರುದ್ಧ 7 ವಿಕೆಟ್ ಭರ್ಜರಿ‌‌ ಜಯ

ಲೀಡ್ಸ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು ಪಡೆದಿದೆ. ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭಾರತ ಗೆಲುವಿಗೆ ಕಾರಣರಾದರು.

ಶ್ರೀಲಂಕಾ ನೀಡಿದ 265 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 39 ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ರೋಹಿತ್ ಶರ್ಮಾ, ರಾಹುಲ್ ಜೋಡಿ 189 ರನ್ ಜೊತೆಯಾಟ ನೀಡಿದ್ದು, 2019ರ ವಿಶ್ವಕಪ್ ಕ್ರಿಕೆಟ್‍ನಲ್ಲಿ ಆಂಭಿಕರಾಗಿ 1 ಸಾವಿರ ಪ್ಲಸ್ ರನ್ ಸಿಡಿಸಿದ ಸಾಧನೆ ಮಾಡಿದರು. ಈ ಹಿಂದೆ 2007 ವಿಶ್ವಕಪ್ ನಲ್ಲಿ ಆಸೀಸ್ ಜೋಡಿ 1,142 ರನ್ ಸಿಡಿಸಿದ್ದು, ಅಲ್ಲದೇ ಇಂದಿನ ಟೂರ್ನಿಯಲ್ಲೂ ಆಸೀಸ್ ಆರಂಭಿಕ ಜೋಡಿ 1 ಸಾವಿರ ಪ್ಲಸ್ ರನ್ ಗಳಿಸಿದೆ.

ರೋಹಿತ್ ಐತಿಹಾಸ ಶತಕ: ಪಂದ್ಯದಲ್ಲಿ 94 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ನೆರವಿನಿಂದ 103 ರನ್ ಸಿಡಿಸಿದ ರೋಹಿತ್ ಶರ್ಮಾ 2019ರ ವಿಶ್ವಕಪ್‍ನಲ್ಲಿ 5ನೇ ಶತಕ ಸಿಡಿಸಿ ಈ ಸಾಧನೆ ಮಾಡಿದ ಮೊದಲಿಗರಾದರು. ಅಲ್ಲದೇ ಟೂರ್ನಿಯಲ್ಲಿ ಒಟ್ಟು 647 ರನ್ ಹೊಡೆದು ಸಚಿನ್ ಬಳಿಕ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎನಿಸಿಕೊಂಡರು. 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ 673 ರನ್ ಸಿಡಿಸಿದ್ದರು.

ಇತ್ತ ರೋಹಿತ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರೆ ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ 118 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ನೆರವಿನಿಂದ 111 ರನ್ ಸಿಡಿಸಿದರು. ರಾಹುಲ್ ವಿಶ್ವಕಪ್ ನಲ್ಲಿ ಸಿಡಿಸಿದ ಮೊದಲ ಶತಕ ಇದಾದರೆ, ವೃತ್ತಿ ಜೀವನದ 2ನೇ ಏಕದಿನ ಶತಕ ಇದಾಗಿದೆ.

ಕೊಹ್ಲಿ ದಾಖಲೆ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಪರ ಮತ್ತೊಂದು ದಾಖಲೆ ನಿರ್ಮಿಸಿದರು. ವಿಶ್ವಕಪ್‍ನಲ್ಲಿ ಕಡಿಮೆ ಇನ್ನಿಂಗ್ಸ್ ಸಾವಿರ ರನ್ ಸಂಪಾದಿಸಲು 5 ರನ್ ಗಳಿಸಿದ ವೇಳೆ ವಿಶ್ವಕಪ್ ಟೂರ್ನಿಯಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದರು. ಆ ಮೂಲಕ ಮಾಜಿ ಆಟಗಾರ ಸಚಿನ್ ಹಾಗೂ ಗಂಗೂಲಿ ಅವರ ಸಾಲಿಗೆ ಸೇರಿದರು. ಪಂದ್ಯಕ್ಕೂ ಮುನ್ನ ವಿಶ್ವಕಪ್ ಕ್ರಿಕೆಟ್‍ನ 2011, 2015, 2019ರ ಟೂರ್ನಿಗಳಲ್ಲಿ ಕೊಹ್ಲಿ ಇದುವರೆಗೂ 24 ಇನ್ನಿಂಗ್ಸ್ ಮೂಲಕ 995 ರನ್ ಗಳಿಸಿದ್ದರು. ಸಚಿನ್ 44 ಇನ್ನಿಂಗ್ಸ್ ಗಳಲ್ಲಿ 2,278 ರನ್ ಸಿಡಿಸಿದ್ದು, ಆ ಬಳಿಕ ಗಂಗೂಲಿ ಅವರು 1,006 ರನ್ ಗಳಿಸಿ ಭಾರತ ಪರ ವಿಶ್ವಕಪ್ ಟೂರ್ನಿಯಲ್ಲಿ ಸಾಧನೆ ಮಾಡಿದ್ದಾರೆ. ಊಳಿದಂತೆ 15 ಇನ್ನಿಂಗ್ಸ್ ಗಳಲ್ಲಿ 874 ರನ್ ಗಳಿಸಿರುವ ರೋಹಿತ್ ಶರ್ಮಾ, 21 ಇನ್ನಿಂಗ್ಸ್ ಗಳಲ್ಲಿ 860 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಪಂದ್ಯದಲ್ಲಿ ರೋಹಿತ್ ಶರ್ಮಾ ಪಂದ್ಯದಲ್ಲಿ ಶತಕ ಗಳಿಸಿದರೆ ಅವರು 1 ಸಾವಿರ ರನ್ ಪೂರೈಸಿದ ಆಟಗಾರರ ಪಟ್ಟಿ ಸೇರಲಿದ್ದಾರೆ.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ಮ್ಯಾಥ್ಯೂಸ್‍ 128 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ನೆರವಿನಿಂದ 113 ರನ್ , ತಿರಿಮಣೆ (53 ರನ್) ಅರ್ಧ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು. ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಪಾಂಡ್ಯ, ಜಡೇಜಾ, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

Leave a Reply

Your email address will not be published. Required fields are marked *