Friday, 22nd November 2019

Recent News

ಬಾಂಗ್ಲಾ ವಿರುದ್ಧ ಗೆದ್ದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಾಖಲೆ ಬರೆದ ಭಾರತ

ನವದೆಹಲಿ: ಗುರುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ-20 ಗೆಲ್ಲುವ ಮೂಲಕ ಭಾರತ ಚುಟುಕು ಪಂದ್ಯಗಳ ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ.

ಬಾಂಗ್ಲಾ ವಿರುದ್ಧ ಭಾನುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸೋತಿದ್ದ ಭಾರತ, ಗುರುವಾರ ರಾಜ್‍ಕೋಟ್‍ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿತ್ತು. ಬಾಂಗ್ಲಾ ನೀಡಿದ 154 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ನಾಯಕ ರೋಹಿತ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 15.4 ಓವರ್ ಗಳಲ್ಲೇ 154 ರನ್ ಹೊಡೆದು ಜಯಗಳಿಸಿತು.

ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಎಂಟು ವಿಕೆಟ್‍ಗಳ ಜಯ ಸಾಧಿಸಿದ ಭಾರತ, ಟಿ-20 ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಹೊಸ ದಾಖಲೆಯನ್ನು ಬರೆದಿದೆ. ಟಿ-20 ಯಲ್ಲಿ ಒಟ್ಟು 69 ಬಾರಿ ಚೇಸಿಂಗ್ ಮಾಡಿರುವ ಆಸಿಸ್ ಅದರಲ್ಲಿ 40 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ 61 ಪಂದ್ಯಗಳಲ್ಲಿ ಚೇಸಿಂಗ್ ಮಾಡಿರುವ ಭಾರತ ಅದರಲ್ಲಿ 41 ಪಂದ್ಯಗಳನ್ನು ಗೆದ್ದು ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ. ಈ ಎರಡು ತಂಡಗಳನ್ನು ಬಿಟ್ಟರೆ ಒಟ್ಟು 67 ಚೇಸಿಂಗ್ ನಲ್ಲಿ ಪಾಕಿಸ್ತಾನ 36 ರಲ್ಲಿ ಗೆಲವು ಸಾಧಿಸಿ ಮೂರನೇ ಸ್ಥಾನ ಪಡೆದಿದೆ.

ಎರಡನೇ ಪಂದ್ಯದಲ್ಲಿ ಬಾಂಗ್ಲಾ ನೀಡಿದ 154 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 15.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ತನ್ನ 100 ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ರೋಹಿತ್ ಶರ್ಮಾ ತಾನು ಹಿಟ್ ಮ್ಯಾನ್ ಎನ್ನುವುದನ್ನು ಮತ್ತೊಮ್ಮೆ ತೋರಿಸಿದರು. 23 ಎಸೆತಗಳಲ್ಲಿ ಅರ್ಧ ಶತಕ ಹೊಡೆತ ರೋಹಿತ್ 85 ರನ್ (43 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಶತಕದಿಂದ ವಂಚಿತರಾದರು. ತನ್ನ ಅತ್ಯುತ್ತಮ ಆಟಕ್ಕಾಗಿ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ರೋಹಿತ್ ಬ್ಯಾಟಿಂಗ್ ಆರ್ಭಟ ಹೇಗಿತ್ತು ಅಂದರೆ 5.2 ಓವರ್ ಗಳಲ್ಲಿ 50 ರನ್ ಬಂದರೆ, 9.2 ಓವರ್ ಗಳಲ್ಲಿ ಭಾರತ 100 ರನ್ ಗಳಿಸಿತು. ನಾಯಕನಿಗೆ ಉತ್ತಮ ಸಾಥ್ ನೀಡಿದ ಶಿಖರ್ ಧವನ್ 31 ರನ್ (27 ಎಸೆತ, 4 ಬೌಂಡರಿ) ಹೊಡೆದರು. ಇವರಿಬ್ಬರು ಮೊದಲ ವಿಕೆಟಿಗೆ 11.5 ಓವರ್ ಗಳಲ್ಲಿ 118 ರನ್ ಜೊತೆಯಾಟವಾಡಿ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಕೊನೆಯಲ್ಲಿ ಕೆ.ಎಲ್. ರಾಹುಲ್ ಔಟಾಗದೇ 8 ರನ್, ಶ್ರೇಯಸ್ ಅಯ್ಯರ್ ಔಟಾಗದೇ 24 ರನ್ (13 ಎಸೆತ, 3 ಬೌಂಡರಿ,1 ಸಿಕ್ಸರ್) ಹೊಡೆದರು. ಕೊನೆಯ ಟಿ 20 ಪಂದ್ಯ ಭಾನುವಾರ ನಾಗ್ಪುರದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *