Monday, 16th September 2019

Recent News

79 ರನ್‍ಗಳಿಗೆ 9 ವಿಕೆಟ್ ಪತನ: ಭಾರತಕ್ಕೆ ಏಕದಿನ ಸರಣಿ

ವಿಶಾಖಪಟ್ಟಣ: ಟೆಸ್ಟ್ ಸರಣಿಯನ್ನು 1-0 ಅಂತರಿಂದ ಗೆದ್ದುಕೊಂಡಿದ್ದ ಭಾರತ ಲಂಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಮೂರನೇ ಏಕದಿನ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಲಂಕಾ 44.5 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್ ಆಯ್ತು.

ಸುಲಭದ ಸವಾಲನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 32.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಭಾರತದ ಪರ ಶಿಖರ್ ಧವನ್ 12ನೇ ಶತಕ ಸಿಡಿಸಿ ಮಿಂಚಿದರೆ ಶ್ರೇಯಸ್ ಅಯ್ಯರ್ ಮೊದಲ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಶಿಖರ್ ಧವನ್ ಔಟಾಗದೇ 100 ರನ್(85 ಎಸೆತ, 13 ಬೌಂಡರಿ, 2 ಸಿಕ್ಸರ್), ಶ್ರೇಯಸ್ ಅಯ್ಯರ್ 65 ರನ್(63 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು.

ಲಂಕಾ ಪರ ಉಪುಲ್ ತರಂಗ 95 ರನ್(82 ಎಸೆತ, 12 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ ಸಮರ ವಿಕ್ರಮ 42 ರನ್(57 ಎಸೆತ, 5 ಬೌಂಡರಿ) ಹೊಡೆದರು. 22.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಲಂಕಾ ನಂತರ 135 ಎಸೆತಗಳಲ್ಲಿ ಕೇವಲ 79 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡ ಪರಿಣಾಮ ಪಂದ್ಯವನ್ನು ಕಳೆದುಕೊಂಡಿತು.

ಭಾರತದ ಪರ ಕುಲದೀಪ್ ಯಾದವ್ ಮತ್ತು ಚಹಲ್ ತಲಾ ಮೂರು ವಿಕೆಟ್ ಪಡೆದರೆ, ಪಾಂಡ್ಯ ಎರಡು, ಭುವನೇಶ್ವರ್ ಕುಮಾರ್ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು. ಶತಕ ಸಿಡಿಸುವುದರ ಜೊತೆ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ಶಿಖರ್ ಧವನ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೊದಲ ಪಂದ್ಯವನ್ನು ಲಂಕಾ 7 ವಿಕೆಟ್ ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯವನ್ನು ಭಾರತ 141 ರನ್ ಗಳಿಂದ ಗೆದ್ದುಕೊಂಡಿತ್ತು. ಲಂಕಾ- ಭಾರತ ನಡುವಿನ ಮೂರು ಟಿ 20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 20 ರಂದು ಕಟಕ್ ನಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *