Saturday, 14th December 2019

ಪೊಲೀಸರು ರಕ್ಷಣೆ ಕೊಟ್ಟರೆ 24 ಗಂಟೆಯೊಳಗೆ ಭಾರತಕ್ಕೆ ಬರುತ್ತೇನೆ : ಮನ್ಸೂರ್ ಖಾನ್

– ಭಾರತದಿಂದಲೇ ವಿಡಿಯೋ ಅಪ್ಲೋಡ್

ಬೆಂಗಳೂರು: ಶೀಘ್ರದಲ್ಲೇ ನಾನು ಭಾರತಕ್ಕೆ ಮರಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನ್ನ ಆರೋಗ್ಯದ ಸಮಸ್ಯೆ (ಕಾರ್ಡಿಯಾಕ್, ಸಕ್ಕರೆ ಕಾಯಿಲೆ) ಕಾರಣ 1 ತಿಂಗಳಿಂದ ಬೆಡ್ ರೆಸ್ಟ್ ನಲ್ಲಿದ್ದೇನೆ. ಈಗ ಹುಷಾರಾಗಿದ್ದು, ಪೊಲೀಸರು ರಕ್ಷಣೆ ನೀಡಿದರೆ 24 ಗಂಟೆಯ ಒಳಗಡೆ ಭಾರತಕ್ಕೆ ಬರುತ್ತೇನೆ ಎಂದು ಐಎಂಎ ವಂಚಕ ಮನ್ಸೂರ್ ಖಾನ್ ಹೇಳಿದ್ದಾನೆ.

ವಿಡಿಯೋ ಬಿಡುಗಡೆ ಮಾಡಿ ಮಾತನಾಡಿರುವ ಮನ್ಸೂರ್, ಕಳೆದ ವಿಡಿಯೋದಲ್ಲಿ ನಾನು ಆದಷ್ಟು ಬೇಗ ವಾಪಸ್ ಬರುವುದಾಗಿ ಹೇಳಿದ್ದೆ. ಆದರೆ ಹೃದಯದ ಆರೋಗ್ಯದ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಬರಲು ಆಗುತ್ತಿಲ್ಲ. ಭಾರತೀಯ ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ. ದೇಶಕ್ಕೆ ಮರಳಿ ಬರಲು ಸೂಕ್ತ ಭದ್ರತೆ ಪಡೆಯಲು ಯತ್ನಿಸುತ್ತಿದ್ದೇನೆ. ಭದ್ರತೆ ನೀಡುತ್ತಾರೆ ಎಂಬ ವಿಶ್ವಾಸವಿದೆ. ನಾನು ಭಾರತ ಬಿಟ್ಟು ಹೋಗಿದ್ದು, ನನ್ನ ದೊಡ್ಡ ತಪ್ಪಾಗಿದ್ದು, ನಾನು ದೇಶ ಬಿಟ್ಟು ಈ ರೀತಿ ಬರಲು ರಾಜಕಾರಣಿಗಳ ಒತ್ತಡ ಕಾರಣವಾಗಿತ್ತು ಎಂದಿದ್ದಾನೆ.

ಬಹು ಸಮಯದಿಂದ ಅನಾರೋಗ್ಯದ ಕಾರಣ ಬೆಡ್ ರೆಸ್ಟ್ ನಲ್ಲಿದ್ದೇನೆ, ಈಗ ನಾನು ಹುಷಾರಿರುವ ಕಾರಣ ವಿಡಿಯೋ ಮಾಡುತ್ತಿದ್ದೇನೆ. ನಾನು ದೇಶ ಬಿಟ್ಟು ಬಂದಿದ್ದು, ತಪ್ಪು, ಈಗಲೂ ನನಗೆ ನನ್ನ ಫ್ಯಾಮಿಲಿ ಎಲ್ಲಿದೆ? ಹೇಗಿದ್ದಾರೆ ಗೊತ್ತಿಲ್ಲ. ನಾನು ಒಂದಷ್ಟು ಲಿಸ್ಟ್ ಮಾಡಿದ್ದು, ಯಾರಿಂದ ಹಣ ಹಿಂಪಡೆಯಬಹುದು ಮಾಡಬಹುದು ಎಂಬುವುದು ಪಟ್ಟಿಯಲ್ಲಿದೆ. ಅಲ್ಲದೇ ಪ್ರಕರಣದ ತನಿಖೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ನಾನು ಅಧಿಕಾರಿಗಳಿಗೆ ಕೊಡುತ್ತೇನೆ. ನಾನು ಮತ್ತೆ ವಾಪಸ್ ಬರುತ್ತಿರುವುದು ಹಣ ವಾಪಾಸ್ ಕೊಡಲಿಕ್ಕೆ ಎಂದು ಅಳುತ್ತಾ ಹೇಳಿದ್ದಾನೆ.

ಭಾರತದಿಂದಲೇ ವಿಡಿಯೋ ಅಪ್ಲೋಡ್: ಸದ್ಯ ಬಿಡುಗಡೆಯಾಗಿರುವ ವಿಡಿಯೋ ಭಾರತದಿಂದಲೇ ಅಪ್ ಲೋಡ್ ಆಗಿದೆ ಎನ್ನುವುದರ ಬಗ್ಗೆ ಎಸ್‍ಐಟಿ ಪೊಲೀಸರು ತನಿಖೆ ನಡೆಸಿದ್ದಾರೆ. ಆಪ್ತರಿಗೆ ವಿಡಿಯೋ ಕಳುಹಿಸಿ ಅಪ್ಲೋಡ್ ಮಾಡಿರುವ ಸಾಧ್ಯತೆ ಇದ್ದು, ಯಾರ ಮುಖಾಂತರ ವಿಡಿಯೋ ಬಿಡುಗಡೆ ಆಗಿದೆ ಎಂಬ ಬಗ್ಗೆ ತನಿಖೆ ಆರಂಭವಾಗಿದೆ. ಮನ್ಸೂರ್ ಸುಖಾ ಸುಮ್ಮನೆ ವಿಡಿಯೋ ಬಿಡುಗಡೆ ಮಾಡಿದ್ದು, ಭಾರತಕ್ಕೆ ಮರಳುವ ನಾಟಕ ಮಾಡುತ್ತಿದ್ದಾನೆ. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *