Monday, 24th February 2020

Recent News

ಐಎಂಎ ಸಾಕ್ಷ್ಯ ನಾಶ – ಮುಂದಿನ ವಾರ ರಾಜಕಾರಣಿಗಳಿಗೆ ಸಿಬಿಐನಿಂದ ಸಮನ್ಸ್?

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ಹಗರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಸಿಬಿಐ ಮುಂದಿನ ವಾರ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ.

ಬಂಧನಕ್ಕೆ ಒಳಗಾಗಿರುವ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ವಿಚಾರಣೆಯ ಸಮಯದಲ್ಲಿ ನಾನು ಹಲವು ರಾಜಕಾರಣಿಗಳಿಗೆ ಹಣವನ್ನು ನೀಡಿದ್ದೆ. ಹಣ ಸಂದಾಯ ಮಾಡಿದ್ದ ದಾಖಲೆಗಳನ್ನು ಅಧಿಕಾರಿಗಳ ಸಹಾಯದಿಂದ ಈಗ ವ್ಯವಸ್ಥಿತವಾಗಿ ನಾಶ ಮಾಡಿದ್ದಾರೆ. ಅದರಲ್ಲೂ ಓರ್ವ ರಾಜಕಾರಣಿಗೆ 11 ಕೋಟಿ ರೂ. ಹಣವನ್ನು ನೀಡಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ.

ವಿಶೇಷ ತಂಡ ರೆಡಿ:
ಕಂಪ್ಯೂಟರಿನಲ್ಲಿದ್ದ ಹಲವು ದಾಖಲೆಗಳನ್ನು ಐಪಿಎಸ್ ಅಧಿಕಾರಿಗಳು ನಾಶ ಮಾಡಿದ್ದಾರೆ ಎಂದು ಮನ್ಸೂರ್ ಅಲಿಖಾನ್ ಹೇಳಿದ ಹಿನ್ನೆಲೆಯಲ್ಲಿ ಸಿಬಿಐ 12 ಮಂದಿ ಸದಸ್ಯರ ತಂಡವನ್ನು ರಚಿಸಿದೆ. ಈ ತಂಡದಲ್ಲಿ ಚಾರ್ಟೆಡ್ ಅಕೌಂಟೆಂಟ್ ಮತ್ತು ಕಂಪ್ಯೂಟರ್ ಫಾರೆನ್ಸಿಕ್ ತಜ್ಞರು ಇದ್ದು ನಾಶವಾಗಿರುವ ದಾಖಲೆಗಳನ್ನು ಬಯಲು ಮಾಡಲಿವೆ.

ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಮೊದಲ ಚಾರ್ಜ್‍ಶೀಟ್ ಸಲ್ಲಿಸಿದೆ. ಐಎಂಎ ಹಗರಣದ ಮಾಸ್ಟರ್‍ ಮೈಂಡ್ ಮನ್ಸೂರ್ ಖಾನ್ ಮತ್ತು ಇತರ 24 ಜನರನ್ನು ಆರೋಪಿಗಳನ್ನಾಗಿ ಸಿಬಿಎ ಹೆಸರಿಸಿದೆ. ಕರ್ನಾಟಕ ಸರ್ಕಾರ ಮನವಿ ಮೇರೆಗೆ ಸಿಬಿಐ ಆಗಸ್ಟ್ 30ರಂದು ರಾತ್ರಿ ಈ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ಆರೋಪ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯವರಿಗೆ ಧರ್ಮದ ಹೆಸರಿನಲ್ಲಿ, ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ವಂಚಿಸಲಾಗಿದೆ. ಈ ಪ್ರಕರಣದಲ್ಲಿ ಹಲವು ಮುಸ್ಲಿಂ ಮೌಲ್ವಿಗಳ ಪಾತ್ರವೂ ಇದೆ ಎಂದು ಉಲ್ಲೇಖಿಸಲಾಗಿದೆ.

ಮನ್ಸೂರ್ ಖಾನ್ ದುಬೈಗೆ ಓಡಿ ಹೋಗುವುದರೊಂದಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ಮನ್ಸೂರ್ ಖಾನ್ ವಿಡಿಯೋ ಬಿಡುಗಡೆ ಮಾಡಿ ರಾಜ್ಯ ಮತ್ತು ಕೇಂದ್ರ ಸರಕಾರದ ಭ್ರಷ್ಟಾಚಾರದಿಂದ ಬೇಸತ್ತು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾಟಕವಾಡಿದ್ದ. ನಂತರ ಭಾರತಕ್ಕೆ ಮರಳಿದ್ದ ಖಾನ್‍ರನ್ನು ನವದೆಹಲಿಯಲ್ಲಿ ಜುಲೈ 21ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾನೆ.

Leave a Reply

Your email address will not be published. Required fields are marked *