Saturday, 14th December 2019

ಮಾರಿ-2 ಚಿತ್ರ ಶೂಟಿಂಗ್ ವೇಳೆ ಧನುಷ್‍ಗೆ ಗಾಯ – ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಚೆನ್ನೈ: ಮಾರಿ-1 ಚಿತ್ರ ಬಿಡುಗಡೆಗೊಂಡು ಯಶಸ್ವಿಗೊಂಡಿದ್ದು, ಮಾರಿ-2 ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ವೇಳೆಯಲ್ಲಿ ಧನುಷ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದ ಚಿತ್ರೀಕರಣಲ್ಲಿ ಧನುಷ್ ಹಾಗೂ ಖಳನಟನಾಗಿ ನಟಿಸುತ್ತಿರುವ ಟೊವಿನೊ ಥಾಮಸ್ ಫೈಟಿಂಗ್ ಸೀನ್ ವೊಂದರಲ್ಲಿ ನಟಿಸುತ್ತಿರುವಾಗ ಈ ಅವಘಡ ಸಂಭವಿಸಿದೆ.

ಈ ಫೈಟಿಂಗ್ ಸೀನ್ ಚಿತ್ರೀಕರಣದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧನುಷ್‍ಗೆ ಎಡಮೊಣಕಾಲಿಗೆ ಗಾಯವಾಗಿದೆ. ಇದರಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಚಿಕಿತ್ಸೆಯ ನಂತರ ಧನುಷ್ ಚೇತರಿಸಿಕೊಂಡಿದ್ದಾರೆಂದು ಚಿತ್ರತಂಡ ಹೇಳಿಕೆ ನೀಡಿದೆ. ಧನುಷ್ ಗಾಯಗೊಂಡ ವಿಷಯ ತಿಳಿದು ರಜನಿಕಾಂತ್ ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಧನುಷ್‍ಗೆ ಧೈರ್ಯ ತುಂಬಿದ್ದಾರೆ.

ಈ ಸಮಯದಲ್ಲಿ ರಜನಿಕಾತ್ ಶೂಟಿಂಗ್‍ಗಾಗಿ ಡೆಹ್ರಾಡೂನ್‍ನಲ್ಲಿ ಇದ್ದುದರಿಂದ ಅವರಿಗೆ ಆಸ್ಪತ್ರೆಗೆ ಬರಲು ಸಾಧ್ಯವಾಗಿಲ್ಲ. ಮೊಬೈಲ್ ಮೂಲಕ ಅವರು ಆರೋಗ್ಯದ ಬಗ್ಗೆ ಮಾತನಾಡಿದ್ದಾರಂತೆ.

‘ನನ್ನ ನಂಬಿಕೆಯ ಅಭಿಮಾನಿಗಳೇ, ನನಗೆ ಹೆಚ್ಚಿನ ಗಾಯಗಳೇನೂ ಆಗಿಲ್ಲ. ನಾನು ಕ್ಷೇಮವಾಗಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮನ್ನು ಮತ್ತಷ್ಟು ಪ್ರೀತಿಸುತ್ತೇನೆ’ ಎಂದು ಟ್ವಿಟ್ಟರ್ ಮೂಲಕ ಧನುಷ್ ಹೇಳಿಕೆ ನೀಡಿದ್ದಾರೆ.

2015ರಲ್ಲಿ ತೆರೆಕಂಡ ಚಿತ್ರ ಮಾರಿ-1. ಬಾಲಾಜಿ ಮೋಹನ್ ಈ ಚಿತ್ರಕಥೆ ಹಾಗೂ ನಿರ್ದೇಶನವನ್ನು ಮಾಡಿದ್ದರು. ಧನುಷ್, ಕಾಜಲ್ ಅಗರ್‍ವಾಲ್, ವಿಜಯ್ ಏಸುದಾಸ್, ರೊಬೊ ಶಂಕರ್ ಮತ್ತಿತರ ಈ ಚಿತ್ರದ ತಾರಾಗಣದಲ್ಲಿದ್ದರು. ಮಾರಿ ಚಿತ್ರದ 2ನೇ ಭಾಗವಾಗಿ ಮಾರಿ-2 ಚಿತ್ರ ತಯಾರಾಗುತ್ತಿದೆ. ಮೊದಲನೇ ಭಾಗದ ನಿರ್ದೇಶಕ ಬಾಲಾಜಿ ಮೋಹನ್‍ರವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.

ಪ್ರೇಮಂ ಚಿತ್ರದ ನಾಯಕಿ ಸಾಯಿಪಲ್ಲವಿ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಾಯಿ ಪಲ್ಲವಿ ಆಟೋರೈಡ್ ಮಾಡಲು ತರಬೇತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ನಾಯಕಿಗೆ ಎಲ್ಲರನ್ನೂ ಕಿಂಡಲ್ ಮಾಡಿ ಜಾಲಿಯಾಗಿರುವಂತಹ ಕಥಾಪಾತ್ರವಿದೆ. ಚಿತ್ರದಲ್ಲಿ ಶರತ್ ಕುಮಾರ್ ಹಾಗೂ ಅವರ ಮಗಳು ವರಲಕ್ಷ್ಮಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಧನುಷ್ ಸ್ವಂತದ್ದೇ ಆದ ವಂಡರ್‍ಬಾರ್ ಫಿಲ್ಮ್ ತಯಾರಿಸುತ್ತಿರುವ ಈ ಚಿತ್ರದಲ್ಲಿ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ.

Leave a Reply

Your email address will not be published. Required fields are marked *