Connect with us

Cricket

ಬ್ಯಾಟ್ ಬೀಸಿ ನಾನು ಕೊಹ್ಲಿ ಎಂದ ಆಸಿಸ್ ಆಟಗಾರನ ಪುತ್ರಿ: ವಿಡಿಯೋ

Published

on

ಸಿಡ್ನಿ: ಭಾರತ ನಾಯಕ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಭಾರತದ ರನ್ ಮೆಷಿನ್ ವಿರಾಟ್‍ಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರ ಪುತ್ರಿ ಕೂಡ ಅಭಿಮಾನಿಯಾಗಿದ್ದಾಳೆ.

ಐಪಿಎಲ್‍ನಲ್ಲಿ ಮಿಂಚುತ್ತಿರುವ ಡೇವಿಡ್ ವಾರ್ನರ್ ಬ್ಯಾಟಿಂಗ್ ವೈಖರಿಗೆ ಭಾರತದಲ್ಲೂ ಅಭಿಮಾನಿಗಳಿದ್ದಾರೆ. ಆದರೆ ಸ್ವತಃ ಅವರ ಮಗಳು ಐವಿ ಮಾ ಈಗ ಕೊಹ್ಲಿ ಅವರ ಅಭಿಮಾನಿಯಾಗಿದ್ದಾಳೆ. ಇದಕ್ಕೆ ಸಾಕ್ಷಿ ಎಂಬಂತೆ ಐವಿ ನಾನು ವಿರಾಟ್ ಕೊಹ್ಲಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಡೇವಿಡ್ ವಾರ್ನರ್ ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ಈ ಪುಟ್ಟ ಹುಡುಗಿ ಭಾರತದಲ್ಲಿ ತುಂಬಾ ಸಮಯವನ್ನು ಕಳೆದಿದ್ದಾಳೆ. ಆದರೆ ಅವಳು ವಿರಾಟ್ ಕೊಹ್ಲಿ ಜೊತೆ ಸಮಯ ಕಳೆಯಲು ಬಯಸುತ್ತಾಳೆ ಎಂದು ಬರೆದು ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡಿದ್ದಾರೆ.

ವಾರ್ನರ್ ಪತ್ನಿ ಕ್ಯಾಂಡಿಸ್ ಸೆರೆಹಿಡಿದಿರುವ ಈ ವಿಡಿಯೋದಲ್ಲಿ, ವಾರ್ನರ್ ಜೊತೆ ಕ್ರಿಕೆಟ್ ಆಡುತ್ತಿರುವ ಐವಿ ನಾನು ವಿರಾಟ್ ಕೊಹ್ಲಿ ಎಂದು ಹಲವಾರು ಬಾರಿ ಹೇಳಿದ್ದಾಳೆ. ಜೊತೆಗೆ ಬ್ಯಾಟ್ ಬೀಸಿ ನಾನು ವಿರಾಟ್ ಕೊಹ್ಲಿ ಎಂದು ಹೇಳಿ ಬಾಲ್ ಅನ್ನು ಹೊಡೆದಿದ್ದಾಳೆ. ಸ್ಟಾರ್ ಬ್ಯಾಟ್ಸ್ ಮ್ಯಾನ್ ವಾರ್ನರ್ ಪುತ್ರಿಯೇ ನಾನು ವಿರಾಟ್ ಕೊಹ್ಲಿ ಆಗಬೇಕು ಎಂದು ಹೇಳಿರುವುದು ಇಲ್ಲಿ ವಿಶೇಷವಾಗಿದೆ.

ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ ಒಟ್ಟಾರೆ ಅತೀ ಹೆಚ್ಚು ರನ್ ಹೊಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಒಟ್ಟು 177 ಪಂದ್ಯಗಳಲ್ಲಿ 37.84 ಸರಾಸರಿಯಲ್ಲಿ 5,412 ರನ್ ಗಳಿಸಿದ್ದಾರೆ. ಐಪಿಎಲ್‍ನಲ್ಲಿ ಸಾರ್ವಕಾಲಿಕ ಅಗ್ರ ರನ್ ಗಳಿಸುವವರ ಪಟ್ಟಿಯಲ್ಲಿ ವಾರ್ನರ್ ನಾಲ್ಕನೇ ಸ್ಥಾನದಲ್ಲಿದ್ದು, 126 ಪಂದ್ಯಗಳಲ್ಲಿ 43.17 ರ ಸರಾಸರಿಯಲ್ಲಿ 4,706 ರನ್ ಗಳಿಸಿದ್ದಾರೆ.