Saturday, 14th December 2019

Recent News

ಸ್ವಾರಿ, ನಾನು ಈಗ ವೇಸ್ಟ್ ವ್ಯಕ್ತಿ ಆಗಿದ್ದೇನೆ – ಭಾವನಾತ್ಮಕ ಡೆತ್‍ನೋಟ್ ಬರೆದು ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ಹೈದರಾಬಾದ್: ಐಐಟಿ ವಿದ್ಯಾರ್ಥಿಯೊಬ್ಬ ಡೆತ್‍ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

ಮಾರ್ಕ್ ಆಂಡ್ರ್ಯೂ ಚಾರ್ಲ್ಸ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಚಾರ್ಲ್ಸ್ ಮೂಲತಃ ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯವನಾಗಿದ್ದು, ಮಾಸ್ಟರ್ ಇನ್ ಡಿಸೈನಿಂಗ್ ಓದುತ್ತಿದ್ದನು. ಸ್ವಲ್ಪ ದಿನದ ಹಿಂದೆ ಚಾರ್ಲ್ಸ್ ಕೊನೆಯ ವರ್ಷದ ಪರೀಕ್ಷೆಯನ್ನು ಬರೆದು ಫೈನಲ್ ಪ್ರೆಸೆಂಟೇಷನ್‍ಗೆ ತಯಾರಿ ನಡೆಸುತ್ತಿದ್ದನು.

ಚಾರ್ಲ್ಸ್ ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ತನ್ನ ಹಾಸ್ಟೆಲ್ ರೂಮಿಗೆ ಹೋಗಿದ್ದದ್ದಾನೆ. ಆದರೆ ಮತ್ತೆ ಆತ ಹಾಸ್ಟೆಲ್ ರೂಮಿನಿಂದ ಹೊರ ಬರದಿರುವ ಕಾರಣ ಮಂಗಳವಾರ ಮಧ್ಯಾಹ್ನ ಆತನ ಸ್ನೇಹಿತರು ರೂಮಿನ ಬಾಗಿಲು ಒಡೆದುಹಾಕಿದ್ದಾರೆ. ಆಗ ಚಾರ್ಲ್ಸ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಮೃತದೇಹದ ಬಳಿ ಡೆತ್‍ನೋಟ್ ಕೂಡ ಸಿಕ್ಕಿದೆ ಎಂದು ಡಿಎಸ್‍ಪಿ ಪಿ. ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

ಡೆತ್‍ನೋಟ್‍ನಲ್ಲಿ ಏನಿದೆ?
ಈ ಪ್ರಪಂಚದಲ್ಲಿ ಫೆಲ್ಯೂರ್ ಗಳಿಗೆ ಯಾವುದೇ ಭವಿಷ್ಯ ಇಲ್ಲ. ನಾನು ನಿಮಗೆ ಹೀಗೆ ನಿರಾಸೆ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ದಯವಿಟ್ಟು ನನ್ನನ್ನು ಮಿಸ್ ಮಾಡಿಕೊಳ್ಳಬೇಡಿ. ಏಕೆಂದರೆ ನಾನು ಅದಕ್ಕೆ ಅರ್ಹನಲ್ಲ. ಅಲ್ಲದೆ ನಾನು ಅದಕ್ಕೆ ಯೋಗ್ಯನೂ ಅಲ್ಲ. ಒಂದು ವಿಷಯ ಮಾತ್ರ ಗೊತ್ತು ನೀವು ನನ್ನನ್ನು ಹೇಗೆ ಪ್ರೀತಿಸಿದ್ದೀರೋ ನಾನು ಹಾಗೆ ನಿಮ್ಮನ್ನು ಪ್ರೀತಿಸಿದ್ದೇನೆ. ನಾನು ಬೇಸರದಿಂದ ಇದ್ದೇನೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೆ ನನ್ನ ಬೆಸ್ಟ್ ಪೋಷಕರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ನನ್ನನ್ನು ಕ್ಷಮಿಸಿ ನಾನು ಈಗ ವೇಸ್ಟ್ ವ್ಯಕ್ತಿ ಆಗಿದ್ದೇನೆ ಎಂದು ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದಾನೆ.

ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಚಾರ್ಲ್ಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆತನ ಪೋಷಕರು ವಾರಾಣಾಸಿಯಿಂದ ಬರುತ್ತಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *