Friday, 17th August 2018

Recent News

ಅನ್ಯ ಪಕ್ಷಗಳ ಶಾಸಕರು ಬಿಜೆಪಿ ಬರ್ತೀವಿ ಅಂದ್ರೆ ಸ್ವಾಗತಿಸುತ್ತೇವೆ: ಶ್ರೀರಾಮುಲು

ಗದಗ: ಅನ್ಯ ಪಕ್ಷಗಳ ಶಾಸಕರು ಬಿಜೆಪಿ ಬರ್ತೀವಿ ಅಂದರೆ ಖಂಡಿತವಾಗಿ ಸ್ವಾಗತಿಸುತ್ತೇವೆ. ಸ್ವಯಂ ಪ್ರೇರಣೆಯಿಂದ ಬಂದರೆ ಬೇಡ ಅನ್ನೋ ಮಾತೇ ಇಲ್ಲ ಅಂತ ಬಿಜೆಪಿ ಮುಖಂಡ, ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರನ್ನೂ ಸಂಪರ್ಕಿಸಲು ಮುಂದಾಗುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಬೆಳವಣಿಗೆಗಳನ್ನು ಸುಮ್ಮನೆ ಗಮನಿಸುತ್ತಾ ಇದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ಶಾಸಕರು ಸ್ವಯಂ ಪ್ರೇರಣೆಯಿಂದ ಬಿಜೆಪಿಗೆ ಬಂದಿದ್ದರು. ಕಾಂಗ್ರೆಸ್‍ನವರು ಅದನ್ನು ಆಪರೇಶನ್ ಕಮಲ ಎಂದು ಬಿಂಬಿಸಿದರು. ಈಗ ಪಕ್ಷೇತರ ಶಾಸಕರನ್ನು ಬಲವಂತವಾಗಿ ಅವರೇ ಹೊತ್ತೊಯ್ಯದರಲ್ಲ ಅದಕ್ಕೆ ಏನಂತ ಕರೆಯಬೇಕು ಅಂತ ಪ್ರಶ್ನೆ ಮಾಡಿದ್ರು.

ರಾಜ್ಯದಲ್ಲಿ ಮಳೆಯಿಂದ ಜನರು ತತ್ತರಿಸಿದ್ದಾರೆ. ಆದ್ರೆ ಕುಮಾರಸ್ವಾಮಿ ಸರ್ಕಾರ ಜನರ ಸಮಸ್ಯೆ ಕೇಳುತ್ತಿಲ್ಲ. ಇನ್ನೂ ಅಧಿಕಾರ ಮತ್ತು ಕುರ್ಚಿ ಕಸರತ್ತು ನಡೆಸುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಎಚ್.ಕೆ. ಪಾಟೀಲ್ ಶಾಸಕರಾಗಿ ಆಯ್ಕೆ ಪ್ರಶ್ನಿಸಿ ಸಿಬಿಐಗೆ ದೂರು ನೀಡಲು ನಿರ್ಧರಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಎಚ್.ಕೆ ಪಾಟೀಲ್ ಬೋಗಸ್ ಮತ ಹಾಕಿಸಿ ಜಯಗಳಿಸಿದ್ದಾರೆ. ಈ ಕುರಿತು ಈಗಾಗಲೇ ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಶ್ರೀರಾಮುಲು ಹೇಳಿದರು.

ಗದಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಎಚ್.ಕೆ.ಪಾಟೀಲ್ ಸ್ಪರ್ಧೆ ಮಾಡಿದ್ದರು. ಇತ್ತ ಬಿಜೆಪಿ ಅಭ್ಯರ್ಥಿಯಾಗಿ ಅನಿಲ್ ಮೆಣಸಿನಕಾಯಿ ಚುನಾವಣಾ ಕಣಕ್ಕೆ ಇಳಿದಿದ್ದರು. ಎಚ್.ಕೆ.ಪಾಟೀಲ್ 77,699 ಮತಗಳನ್ನು ಪಡೆದಿದ್ದರೆ, ಅನಿಲ್ ಮೆಣಸಿನಕಾಯಿ 75,831 ಮತಗಳನ್ನು ಪಡೆದುಕೊಂಡಿದ್ದರು. ಎಚ್.ಕೆ.ಪಾಟೀಲ್ 1,868 ಅಲ್ಪಮತಗಳ ಮುನ್ನಡೆಯಲ್ಲಿ ಗೆಲುವುನ್ನು ತಮ್ಮದಾಗಿಸಿಕೊಂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *