Connect with us

Latest

ಶಸ್ತ್ರ ಪೂಜೆಯಲ್ಲಿ ಓಂ ಬರೆಯದೆ ಮತ್ತೇನು ಬರೆಯಬೇಕಿತ್ತು: ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

Published

on

ಚಂಡೀಗಢ: ಶಸ್ತ್ರ ಪೂಜೆಯ ವೇಳೆ ಓಂ ಬರೆಯದೆ ಮತ್ತೇನು ಬರೆಯಬೇಕಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹರ್ಯಾಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಕೇಂದ್ರ ಸಚಿವರು, ವಿಜಯದಶಮಿ ದಿನದಂದು ಶಸ್ತ್ರ ಪೂಜೆ ಸಲ್ಲಿಸುವುದು ನಮ್ಮ ಸಂಪ್ರದಾಯ. ಆ ದಿನ ನಾನು ರಫೇಲ್ ಯುದ್ಧ ವಿಮಾನದ ಮೇಲೆ ಓಂ ಎಂದು ಬರೆದಿದ್ದೆ. ಆದರೆ ಕೆಲವರು ನಾನು ಯಾಕೆ ಓಂ ಅಂತ ಬರೆದೆ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರಿಗೆ ಒಂದು ಮಾತು ಕೇಳಲು ಇಚ್ಛಿಸುತ್ತೇನೆ. ಏನೆಂದರೆ ಓಂ ಬದಲಾಗಿ ನಾನು ಏನನ್ನು ಬರೆಯಬಹುದಿತ್ತು ಅಂತ ಅವರು ಹೇಳಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ನಲ್ಲಿ ರಫೇಲ್ ಇದ್ದಿದ್ರೆ ಇಲ್ಲಿಂದಲೇ ದಾಳಿ ನಡೆಸಬಹುದಿತ್ತು: ರಾಜನಾಥ್ ಸಿಂಗ್

ಇದೇ ವೇಳೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು. ಜಮ್ಮು-ಕಾಶ್ಮೀರ ವಿಚಾರ ಆಂತರಿಕ ವಿಚಾರವಾಗಿದೆ. ಆದರೆ ಇದನ್ನು ನೀವು ಅಂತರಾಷ್ಟ್ರೀಯ ಸಮಸ್ಯೆಯಾಗಿ ಮಾಡಲು ಇಚ್ಛಿಸುತ್ತೀರಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ದೇಶದ ಆರ್ಥಿಕತೆಗಿಂತ 370ರ ಬಗ್ಗೆಯೇ ಹೆಚ್ಚು ನಂಬಿಕೆ: ಎಚ್‍ಡಿಡಿ ಟಾಂಗ್

ವಿಜಯದಶಮಿ ದಿನವಾದ ಅಕ್ಟೋಬರ್ 8ರಂದು ಫ್ರಾನ್ಸ್ ನ ಒಂದು ರಫೇಲ್ ಯುದ್ಧ ವಿಮಾನವು ಭಾರತಕ್ಕೆ ಹಸ್ತಾಂತರಗೊಂಡಿತ್ತು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ಯಾರಿಸ್‍ನ ಬೊರಾಡೆಕ್ಸ್ ಸಮೀಪದ ಮೆರಿಗ್ನ್ಯಾಕ್ ವಾಯು ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡಿದ್ದರು. ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನದ ಮೇಲೆ ಓಂ ಎಂದು ಬರೆದಿದ್ದು, ಚಕ್ರಕ್ಕೆ ನಿಂಬೆಹಣ್ಣು ಇಟ್ಟಿದ್ದ ವಿಚಾರವಾಗಿ ಕೆಲ ವಿಪಕ್ಷ ನಾಯಕರು ವ್ಯಂಗ್ಯವಾಡಿದ್ದರು. ಅದಕ್ಕೆ ಈಗ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.

ಭಾರತ ಖರೀದಿಸುತ್ತಿರುವ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದು ವಿಮಾನವನ್ನು ಮಾತ್ರ ಫ್ರಾನ್ಸ್ ಹಸ್ತಾಂತರಿಸಿದೆ. ಉಳಿದಂತೆ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ.