Friday, 17th August 2018

Recent News

ಸಚಿವ ಸ್ಥಾನ ಸಿಗದೇ ಇದ್ರೆ ಬೇಜಾರು ಆಗುತ್ತೆ, ನಾನು ಕೂಡ ಮನುಷ್ಯ ತಾನೇ: ಜೆಡಿಎಸ್ ಶಾಸಕ

ತುಮಕೂರು: ಸಚಿವ ಸ್ಥಾನ ಸಿಗದೇ ಹೋದ್ರೆ ಬೇಜಾರು ಆಗೇ ಆಗುತ್ತದೆ. ನಾನು ಮನುಷ್ಯ ತಾನೇ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಎರಡು ವಾರ ಕಳೆದ ನಂತರ ಸಂಪುಟ ರಚನೆ ಇಂದು ಮುಹೂರ್ತ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತುರ್ತು ಕರೆ ಮಾಡಿ 10 ಗಂಟೆಯೊಳಗೆ ಬೆಂಗಳೂರಿಗೆ ಆಗಮಿಸುವಂತೆ ಶಾಸಕ ಶ್ರೀನಿವಾಸ್ ಅವ್ರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನತ್ತ ಪ್ರಯಾಣಿಸುವ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಕಳೆದ ನಾಲ್ಕು ಬಾರಿ ಗೆದ್ದು ಕೆಲಸ ಮಾಡಿದ್ದೇನೆ. ಸಚಿವ ಸ್ಥಾನಕ್ಕಾಗಿ ಕೊನೆ ಕ್ಷಣದವರೆಗೂ ಹೋರಾಟ ಮಾಡುತ್ತೇನೆ. ಕುಮಾರಸ್ವಾಮಿ ಅವರು ಸಹ ನನ್ನನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದಾರೆ. ಆ ಮಾತನ್ನ ಸಿಎಂ ಉಳಿಸಿಕೊಳ್ತಾರೆ ಎಂದು ಭಾವಿಸುತ್ತೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

ಇಂದು ಮಧ್ಯಾಹ್ನ 02-12ಕ್ಕೆ ರಾಜಭವನದ ಗ್ಲಾಸ್‍ಹೌಸ್‍ನಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಪ್ರಮಾಣವಚನ ಬೋಧಿಸಲಿದ್ದಾರೆ. ಜೆಡಿಎಸ್‍ನಿಂದ 8 ಜನ, ಕಾಂಗ್ರೆಸ್‍ನಿಂದ 15 ಜನ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಎರಡೂ ಪಕ್ಷಗಳಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ದಟ್ಟವಾಗಿರುವ ಕಾರಣ, ಪರಿಸ್ಥಿತಿ ಅವಲೋಕಿಸಿ 2ನೇ ಹಂತದ ವಿಸ್ತರಣೆಗೆ ಮೈತ್ರಿಕೂಟ ಸರ್ಕಾರ ನಿರ್ಧರಿಸಿದೆ.

ಜೆಡಿಎಸ್‍ಗೆ ಹೋಲಿಸಿದರೆ, ಕಾಂಗ್ರೆಸ್‍ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ದೆಹಲಿಯಲ್ಲಿ ಸಭೆಗಳ ಮೇಲೆ ಸಭೆ ನಡೆದಿವೆ. ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ಅಂತಿಮ ಪಟ್ಟಿ ಹೊರಬೀಳಲಿದೆ. ಇನ್ನು, ರಾಜಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ 1500 ಜನರಿಗೆ ರಾಜಭವನಕ್ಕೆ ಪ್ರವೇಶ ಪಡೆಯಲು ಪಾಸ್ ವಿತರಿಸುವಂತೆ ಸರ್ಕಾರದಿಂದ ವಾರ್ತಾ ಇಲಾಖೆಗೆ ಸೂಚನೆ ನೀಡಲಾಗಿದೆ. ಹೀಗಾಗಿ 300ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಖಾತೆ ಹಂಚಿಕೆ ಬಗ್ಗೆ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಕೂತು ಅದನ್ನೆಲ್ಲಾ ತೀರ್ಮಾನ ಮಾಡುತ್ತಾರೆ. ಅದಕ್ಕೆ ಶಾಸಕರಾದ ನಾವೆಲ್ಲ ಒಟ್ಟಾಗಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಸಂಪುಟ ರಚನೆಯನ್ನು ಸಿಎಂ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಅವರು ಯಾವ ಖಾತೆ ಕೊಟ್ರೂ ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟವಾಗಿದ್ದು, ಜೆಡಿಎಸ್ ನಲ್ಲಿ ಅಂತಹ ಯಾವುದೇ ಅಸಮಾಧಾನವಿಲ್ಲ. ಹೀಗಾಗಿ ಎಲ್ಲರೂ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ಕುಮಾರಣ್ಣ ಏನ್ ಹೇಳ್ತಾರೋ ಅದನ್ನು ಕೇಳಲು ರೆಡಿಯಾಗಿದ್ದೇವೆ ಅಂತಾ ಜೆಡಿಎಸ್ ಹಿರಿಯ ಮುಖಂಡ ಹಾಗು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

Leave a Reply

Your email address will not be published. Required fields are marked *