Friday, 13th December 2019

ದೇವೇಗೌಡ್ರ ಕುಟುಂಬ ಸನ್ಯಾಸ ಪಡೆದ್ರೆ ರಾಜ್ಯಕ್ಕೆ ಒಳ್ಳೆಯದು – ಕರಂದ್ಲಾಜೆ

ಉಡುಪಿ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ್ರೆ ರೇವಣ್ಣ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದ್ದರು. ರೇವಣ್ಣ ಒಬ್ಬರು ಬೇಡ, ಗೌಡರ ಇಡೀ ಕುಟುಂಬ ರಾಜಕೀಯ ಸನ್ಯಾಸ ಪಡೆಯಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನ್ಯಾಸ ಸ್ವೀಕಾರಕ್ಕೆ ಸಚಿವ ರೇವಣ್ಣ ಗುರುಗಳನ್ನು ಹುಡುಕುತ್ತಿರಬಹುದು. ಅವರ ಕುಟುಂಬದ ಹೆಚ್ಚು ಜನರು ರಾಜಕೀಯ ಸನ್ಯಾಸ ಪಡೆದರೆ ರಾಜ್ಯಕ್ಕೆ ಒಳ್ಳೆಯದು ಎಂದು ಸಂಸದೆ ವ್ಯಂಗ್ಯವಾಡಿದರು.

ಇದೇ ವೇಳೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ತಿರುಗೇಟು ನೀಡಿದ ಶೋಭಾ, ವಿಧಾನಸೌಧದ ವಾಸ್ತು ಸರಿ ಇಲ್ವಾ? ಮೂರನೇ ಮಹಡಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಏನು ಸಮಸ್ಯೆ? ಕಳೆದ ಬಾರಿ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಏನಾಗಿದೆ? ಗ್ರಾಮ ವಾಸ್ತವ್ಯದಿಂದ ಅಭಿವೃದ್ಧಿ ಆಗಲ್ಲ. ಜನ ನಿಮಗೆ ಅಧಿಕಾರ ಕೊಟ್ಟಿರುವುದು ಕೇವಲ ಗ್ರಾಮ ವಾಸ್ತವ್ಯ ಮಾಡಲು ಅಲ್ಲ. ವಿಧಾನಸೌಧದಲ್ಲಿ ಕುಳಿತುಕೊಂಡು ಕೆಲಸ ಮಾಡಲು ಅಧಿಕಾರ ಕೊಟ್ಟಿದ್ದಾರೆ ಎಂದು ಟಾಗ್ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಒಂದು ದಿನ ಕುಳಿತುಕೊಳ್ಳಲ್ಲ. ತಾಜ್ ಹೊಟೇಲ್ ವೆಸ್ಟ್ ಎಂಡ್‍ನಿಂದಲೇ ಆಡಳಿತ ನಡೆಸುತ್ತಾರೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಟೇಲ್ ರೂಂನಿಂದ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ವ್ಯವಹಾರಕ್ಕೆ ಬರುವವರಿಗೆ ಅನುಕೂಲ. ಆದರೆ ಜನರಿಗೆ ಭೇಟಿ ಮಾಡಲು ಕಷ್ಟ. ವಿಧಾನಸೌಧದಲ್ಲಿ ವಾಸ್ತುವೇ ಇಲ್ಲ ಅನಿಸಿಬಿಟ್ಟಿದ್ಯಾ ಎಂದು ಅವರು ಪ್ರಶ್ನೆ ಮಾಡಿದರು.

Leave a Reply

Your email address will not be published. Required fields are marked *