Thursday, 17th October 2019

Recent News

ಅಂಪೈರ್‌ಗೆ ಕೈ ಮುಗಿದ ಕೊಹ್ಲಿಗೆ ಭಾರೀ ದಂಡ

ಸೌತಾಂಪ್ಟನ್: ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್‍ಗೆ ಕೈ ಮುಗಿದು ಅಶಿಸ್ತು ತೋರಿದ್ದಕ್ಕೆ ಭಾರೀ ದಂಡ ತೆತ್ತಿದ್ದಾರೆ.

ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿಕೊಂಡಿದ್ದರು ಮತ್ತು ಅಂಪೈರ್ ಜೊತೆ ವಾಗ್ವಾದ ಮಾಡಿದ್ದರು. ಅದ್ದರಿಂದ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಕ್ಕೆ ಪಂದ್ಯದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

ಪಂದ್ಯದ ಎರಡನೇ ಇನ್ನಿಂಗ್ಸ್ ನ ಅರಂಭದಲ್ಲಿ ಮೊಹಮ್ಮದ್ ಶಮಿ ಅಫ್ಘಾನ್ ಆರಂಭಿಕ ಆಟಗಾರ ಹಜರತುಲ್ಲಾ ಜಜೈ ವಿರುದ್ಧ ಎಲ್‍ಬಿ ಮನವಿಯನ್ನು ಅಂಪೈರ್ ಪುರಸ್ಕರಿಸಿರಲಿಲ್ಲ. ಈ ಸಮಯದಲ್ಲಿ ಕೊಹ್ಲಿ ಡಿಆರ್‍ಎಸ್ ನೆರವಿನಿಂದ ಮೇಲ್ಮನವಿ ಸಲ್ಲಿಸಿದ್ದರು. ರಿಪ್ಲೈ ವೇಳೆ ಬಾಲ್ ಲೆಗ್ ಸ್ಟಂಪ್‍ನಿಂದ ಹೊರಗೆ ಇದ್ದ ಕಾರಣ ಔಟ್ ನೀಡಲಿಲ್ಲ. ಪಂದ್ಯದ ಅರಂಭಿಕ ಹಂತದಲ್ಲೇ ಡಿಆರ್‍ಎಸ್‍ನನ್ನು ಕಳೆದುಕೊಂಡ ಕೊಹ್ಲಿ ಅಂಪೈರ್ ಜೊತೆ ಆಕ್ರಮಣಕಾರಿಯಾಗಿ ವರ್ತಿಸಿದ್ದರು.

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ 11 ರನ್ ಗಳಿಂದ ಈ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತ್ತು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಲ್ಕನೇ ಜಯ ಸಾಧಿಸಿದೆ. ಟಾಸ್ ಗೆದ್ದ ಭಾರತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತ್ತು. 225 ರನ್ ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತ್ತು.

ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 16 ರನ್ ಬೇಕಿತ್ತು. ಈ ಓವರ್ ನಲ್ಲಿ ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಈ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡರು. 46ನೇ ಓವರ್ ನಲ್ಲಿ ಬುಮ್ರಾ 7 ರನ್ ನೀಡಿದರೆ, 49 ನೇ ಓವರ್ ನಲ್ಲಿ 5 ರನ್ ನೀಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 10 ಓವರ್ ಎಸೆದ ಬುಮ್ರಾ 1 ಮೇಡನ್ ಓವರ್ 39 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *