Saturday, 7th December 2019

ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ – ಮಂಜ್ರೇಕರ್‌ಗೆ ಜಡೇಜಾ ಖಡಕ್ ಮಾತು

ಬೆಂಗಳೂರು: ವಿಶ್ವಕಪ್ ಟೂರ್ನಿಯ ವೀಕ್ಷಕ ವಿವರಣೆಗಾರ, ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ವಿರುದ್ಧ ಆಲ್‍ರೌಂಡರ್ ರವೀಂದ್ರ ಜಡೇಜಾ ಗರಂ ಆಗಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುವ ಸಮಯದಲ್ಲಿ ಮಂಜ್ರೇಕರ್ ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಟೆಸ್ಟ್ ಪಂದ್ಯದಲ್ಲಿ ಜಡೇಜಾ ನಿಜವಾಗಿಯೂ ಬೌಲರ್. ಆದರೆ 50 ಓವರ್‌ಗಳ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಮತ್ತು ಸ್ಪಿನ್ನರ್ ಆಗಿರುತ್ತಾರೆ ಎಂದು ಹೇಳಿದ್ದರು.

ಮಂಜ್ರೇಕರ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜಡೇಜಾ ಒಂದು ಪಂದ್ಯವನ್ನು ಆಡದೇ ಇದ್ದರೂ ಅವರ ಕೊಡುಗೆ ವಿಶ್ವಕಪ್‍ನಲ್ಲಿ ಸಾಕಷ್ಟಿದೆ. ಭಾರತದ ಗೆಲುವಿನ ಹಿಂದೆ ಅವರ ಕ್ಯಾಚ್ ಸಹ ಇದೆ ಎನ್ನುವದನ್ನು ಮರೆಯಬೇಡಿ ಎಂದು ಹೇಳಿ ಕ್ರಿಕೆಟ್ ಅಭಿಮಾನಿಗಳು ಮಂಜ್ರೇಕರ್ ವಿರುದ್ಧ ಕಿಡಿ ಕಾರುತ್ತಿದ್ದರು.

ಚರ್ಚೆ ಜೋರು ಆಗುತ್ತಿದ್ದಂತೆ ಜಡೇಜಾ, ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ. ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿದವರನ್ನು ಗೌರವಿಸಲು ಕಲಿತುಕೊಳ್ಳಿ. ನಿಮ್ಮ ಅತಿಸಾರದ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ ಎಂದು ಖಾರವಾಗಿ ಬರೆದು ಮಂಜ್ರೇಕರ್ ಅವರಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದಾರೆ.

ಜಡೇಜಾ ಅವರ ಟ್ವೀಟ್ ಅನ್ನು 38 ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದರೆ 1.60 ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

ಮಂಜ್ರೇಕರ್ ಒಟ್ಟು 74 ಏಕದಿನ ಪಂದ್ಯವಾಡಿದ್ದು, 1994 ರನ್ ಗಳಿಸಿದ್ದಾರೆ. ಜಡೇಜಾ 151 ಏಕದಿನ ಪಂದ್ಯವಾಡಿದ್ದು 2035 ರನ್ ಗಳಿಸಿದ್ದಾರೆ. 41 ಟೆಸ್ಟ್ ಪಂದ್ಯಗಳಲ್ಲಿ 192 ವಿಕೆಟ್, 151 ಏಕದಿನ ಪಂದ್ಯಗಳ 147 ಇನ್ನಿಂಗ್ಸ್ ನಲ್ಲಿ ಜಡೇಜಾ 174 ವಿಕೆಟ್ ಕಿತ್ತಿದ್ದಾರೆ.

ಮಂಜ್ರೇಕರ್ ಅವರು ಧೋನಿ ಅವರನ್ನು ಟೀಕೆ ಮಾಡಿದ್ದರು. ಸ್ಟ್ರೈಕ್ ರೇಟ್ ಮತ್ತು ಕೊನೆಯ ಓವರಿನಲ್ಲಿ ಒಂಟಿ ರನ್ ತೆಗೆದುಕೊಳ್ಳುತ್ತಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದರು. ಕಪ್ ಗೆಲ್ಲಲು ಹೊರಟ ಭಾರತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ತಂಡವೆಂದರೆ ಅದು ಇಂಗ್ಲೆಂಡ್ ಮಾತ್ರ. ಕೊನೆಯಲ್ಲಿ ಧೋನಿ ಆಟ ಭಾರತದ ಗೆಲುವಿಗೆ ಅಡ್ಡಿಯಾಯಿತು ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಸಿಟ್ಟಾದ ಧೋನಿ ಅಭಿಮಾನಿಗಳು ವೀಕ್ಷಕ ವಿವರಣೆಯ ಹುದ್ದೆ ನೀಡಿದ್ದಕ್ಕೆ ಆ ಹುದ್ದೆಗೆ ತಕ್ಕುದಾದ ಭಾಷೆಯನ್ನು ಬಳಸಿ. ಏನೋ ಗೊತ್ತಿದೆ ಎನ್ನುವ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *