Connect with us

Davanagere

ಕೇರಳ ವಧು, ಆಂಧ್ರ ವರನಿಗೆ ಕರ್ನಾಟಕದಲ್ಲಿ ಪ್ರೀತಿ – ಹಸೆಮಣೆ ಏರಿದ ಐಎಎಸ್ ಅಧಿಕಾರಿಗಳು!

Published

on

ದಾವಣಗೆರೆ: ಪ್ರೇಮಿಗಳ ದಿನವೇ ದಾವಣಗೆರೆ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ಹಸೆಮಣೆ ಏರಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಎಸ್ ಅಶ್ವತಿ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರೇಮ ವಿವಾಹವಾಗಿದ್ದಾರೆ.

ಕೇರಳ ವಧು, ಆಂಧ್ರ ವರನಿಗೆ ಕರ್ನಾಟಕದಲ್ಲಿ ಪ್ರೀತಿ ಮೊಳಕೆಯೊಡೆದು ಪ್ರೇಮಿಗಳ ದಿನದಂದೇ ನವ ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಕೇವಲ ಅರ್ಧ ಗಂಟೆಯಲ್ಲಿ ಸರಳ ವಿವಾಹ ಮುಗಿದಿದ್ದು ಹೊಸ ಜೀವನಕ್ಕೆ ಅಧಿಕಾರಿಗಳು ಕಾಲಿಟ್ಟಿದ್ದಾರೆ.

ಸಿಇಒ ಎಸ್ ಅಶ್ವತಿ ತವರೂರಾದ ಕೇರಳದ ಕೋಯಿಕ್ಕೊಡ್ ನಲ್ಲಿ ಮದುವೆಯಾಗಿದ್ದು, ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರ ಜೊತೆ ಸರಳ ವಿವಾಹ ಮಾಡಿಕೊಂಡರು. ಇದೇ ಫೆಬ್ರವರಿ 17 ಕ್ಕೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‍ರ ಊರಾದ ಆಂಧ್ರದ ವಿಶಾಖಪಟ್ಟಣದ ನಿವಾಸದಲ್ಲಿ ಆರತಕ್ಷತೆ ನಡೆಯಲಿದೆ.

ಡಾ. ಬಗಾದಿ ಗೌತಮ್ ಮತ್ತು ಎಸ್. ಅಶ್ವತಿ ಪರಸ್ಪರ ಪ್ರೀತಿಸುತ್ತಿದ್ದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾ. ಬಗಾದಿ ಗೌತಮ್ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಎಸ್. ಅಶ್ವತಿ ಜೊತೆಗೆ ಮದುವೆಯ ಮಾತುಕತೆ ನಡೆದಿತ್ತು. ರಾಜ್ಯದ ಪ್ರಮುಖ ಐಎಎಸ್ ಅಧಿಕಾರಿ ಮುಂದಾಳತ್ವದಲ್ಲಿ ಎರಡು ಕುಟುಂಬದ ಜೊತೆ ಮದುವೆ ಮಾತುಕತೆ ನಡೆದಿತ್ತು.

ಪ್ರೀತಿ ಬಹಿರಂಗ ಆಗಿದ್ದು ಹೇಗೆ:
ಬಗಾದಿ ಹಾಗೂ ಅಶ್ವತಿ ನಾಲ್ಕು ತಿಂಗಳ ಹಿಂದೆ ರಾಯಚೂರಿನಿಂದ ದಾವಣಗೆರೆಗೆ ಬಂದಿದ್ದರು. ಬಳಿಕ ಇಬ್ಬರು ಕೆಲವು ಸಭೆ-ಸಮಾರಂಭಗಳಲ್ಲಿ ಒಟ್ಟಿಗೆ ಭಾಗವಹಿಸುತ್ತಿದ್ದರು. ಆಗ ಅವರು ತಮ್ಮ ಪ್ರೀತಿಯ ಬಗ್ಗೆ ಯಾರಿಗೂ ಹೇಳಲಿಲ್ಲ. ಫೆ.1ರಂದು ಇಬ್ಬರು ನಮ್ಮ ಮದುವೆ ಎಂದು ಆಮಂತ್ರಣ ಪತ್ರಿಕೆ ಕೊಟ್ಟಾಗಲೇ ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಆಗ ಇಬ್ಬರು ತಮ್ಮ ಪ್ರೀತಿ ಶುರುವಾಗಿದ್ದು ಹೇಗೆ ಎಂಬುದು ಎಲ್ಲರ ಬಳಿ ಹಂಚಿಕೊಂಡಿದ್ದರು.

ಗೌತಮ್ 2009ನೇ ಬ್ಯಾಚ್‍ನ ಹಿರಿಯ ಐಎಎಸ್ ಅಧಿಕಾರಿ ಆದರೆ, ಅಶ್ವತಿ 2013ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಆಗಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಅಶ್ವತಿ ಕ್ಯಾಲಿಕಟ್‍ನ ಹಿರಿಯ ವಕೀಲರಾದ ಸೆಲ್ವಿರಾಜ್ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಪುಷ್ಪಾ ಅವರ ಪುತ್ರಿಯಾಗಿದ್ದು, ಕ್ಯಾಲಿಕಟ್‍ನಲ್ಲಿ ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಮುಗಿಸಿದ್ದಾರೆ. ಬಳಿಕ ಮಣಿಪಾಲ್‍ನಲ್ಲಿ ತಮ್ಮ ಎಂಬಿಎಯನ್ನು ಮುಗಿಸಿದ್ದಾರೆ. ಅಶ್ವತಿ ಅವರಿಗೆ ಸಮಾಜ ಸೇವೆಯಲ್ಲಿ ಆಸಕ್ತಿ ಇರುವುದರಿಂದ ಅವರು ಐಎಎಸ್ ಪರೀಕ್ಷೆ ಬರೆದರು. ಆದರೆ ಮೊದಲೆರಡು ಬಾರಿ ಅವರು ಯಶಸ್ವಿಯಾಗಲಿಲ್ಲ. ಮೂರನೇ ಬಾರಿ ಅವರು ಐಎಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು.

ಗೌತಮ್ ಕೃಷ್ಣ ರಾವ್ ಹಾಗೂ ಪಾವತಿಯ ಪುತ್ರನಾಗಿದ್ದು, ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದರು. ಬಳಿಕ ಆಂಧ್ರದ ರಂಗರಾಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಮುಗಿಸಿದ್ದರು. ಇದಾದ ಬಳಿಕ 2009ರಲ್ಲಿ ಐಎಎಸ್ ಪರೀಕ್ಷೆ ಬರೆದು ಬೆಳಗಾವಿಯಲ್ಲಿ ಸಿಇಒ ಆಗಿದ್ದರು. ಆದಾದ ಬಳಿಕ ಅವರು ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ ದಾವಣಗೆರೆಗೆ ಬಂದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv