Sunday, 25th August 2019

ಸಂಕ್ರಾಂತಿಯ `ಕ್ರಾಂತಿ’ ಆದ್ರೆ ನೋಡೋಣ: ಸತೀಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಂಕ್ರಾಂತಿಯ ನಂತರ ಕ್ರಾಂತಿ ನಡೆಯುತ್ತದೆ ಎಂದು ಹೇಳಲಾಗುತ್ತಿದ್ದು, ಕ್ರಾಂತಿ ಆದರೆ ನೋಡೋಣ ಎಂದು ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಂಕ್ರಾಂತಿ ಕ್ರಾಂತಿ ಆದರೆ ನಾವು ಇಲ್ಲೇ ಇರುತ್ತೇವೆ. ದೇಶ, ರಾಜ್ಯ ಹಾಗೂ ನಮ್ಮ ಸರ್ಕಾರ ಇಲ್ಲೇ ಇರುತ್ತದೆ. ಅಲ್ಲಿಯವರೆಗೂ ಕಾದು ನೋಡೋಣ. ಆದರೆ ಆಪರೇಷನ್ ಕಮಲದ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ ಎಂದರು.

ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ನನ್ನ ಸಂಪರ್ಕಕ್ಕೆ ಇದೂವರೆಗೂ ರಮೇಶ್ ಜಾರಕಿಹೊಳಿ ಅವರು ಸಿಕ್ಕಿಲ್ಲ. ಆದರೆ ಅವರು ಪಕ್ಷದಲ್ಲೇ ಇರುತ್ತಾರೆ. ದೆಹಲಿಯಿಂದ ಅವರು ವಾಪಸ್ ಆದ ಬಳಿಕ ಕುಳಿತು ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಕೂಡ ಸಂಪರ್ಕ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ರಮೇಶ್ ಅವರು ಯಾವಾಗ ಬರುತ್ತಾರೆ ನೋಡಿ ಸಂಪರ್ಕ ಮಾಡುತ್ತೇನೆ ಎಂದರು.

ವಿರೋಧಿ ಪಕ್ಷಗಳ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ಸಮ್ಮಿಶ್ರ ರಚನೆಯಾದ ಸಮಯದಿಂದಲೂ ಅವರು ಇದನ್ನೇ ಹೇಳುತ್ತಿದ್ದಾರೆ. ಆದರೆ ಏನು ನಡೆದಿಲ್ಲ. ಇದು ಊಹಾಪೋಹ ಅಷ್ಟೇ, ನಮ್ಮ ಸರ್ಕಾರ ಸುಭದ್ರವಾಗಿದೆ. ಸಮ್ಮಿಶ್ರ ಸರ್ಕಾರ ರಚನೆ ವೇಳೆ ರಾಜಕೀಯ ತಂತ್ರಗಾರಿಕೆ ನಡೆಯುತ್ತದೆ ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಅರಣ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದ ಸಚಿವರು, ನಮ್ಮ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ, ಅರಣ್ಯ ಬೆಳೆಸುವುದಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾವುದು. ಆದರೆ ಅದಕ್ಕೆ ಕಾಲಾವಕಾಶ ಬೇಕು. ಕಾನೂನು ಬದ್ಧವಾಗಿ ಹೆಚ್ಚು ಹಕ್ಕು ಪತ್ರಗಳನ್ನ ನೀಡಿದ್ದು, ಈಡೀ ರಾಜ್ಯಾದ್ಯಂತ ಹಕ್ಕು ಪತ್ರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *