Wednesday, 23rd October 2019

ನಾನು ಭಾರತಕ್ಕಾಗಿ ಇನ್ನೂ ಹೆಚ್ಚು ಪದಕ ತರುತ್ತೇನೆ – ಮೋದಿಗೆ ಭರವಸೆ ಕೊಟ್ಟ ಹಿಮಾ

ನವದೆಹಲಿ: ಭಾರತಕ್ಕೆ ಐದು ಚಿನ್ನದ ಪದಕ ತಂದ ಗೋಲ್ಡನ್ ಓಟಗಾರ್ತಿ ಹಿಮಾ ದಾಸ್ ಅವರು ನಾನು ಹೆಚ್ಚು ಶ್ರಮವಹಿಸಿ ಭಾರತಕ್ಕಾಗಿ ಹೆಚ್ಚು ಪದಕಗಳನ್ನು ತಂದು ಕೊಡುತ್ತೇನೆ ಎಂದು ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

ಈ ಒಂದೇ ತಿಂಗಳಲ್ಲಿ ಭಾರತಕ್ಕೆ ಐದು ಚಿನ್ನದ ಪದಕ ತಂದುಕೊಟ್ಟ ಹಿಮಾ ದಾಸ್ ಅವರನ್ನು ಅಭಿನಂದಿಸಿದ್ದ ಮೋದಿ ಅವರು “ಕಳೆದ ಕೆಲವು ದಿನಗಳಿಂದ ಹಿಮಾ ದಾಸ್ ಅವರು ಮಾಡಿದ ಅದ್ಭುತ ಸಾಧನೆಗಳ ಬಗ್ಗೆ ಭಾರತ ತುಂಬಾ ಹೆಮ್ಮೆಪಡುತ್ತದೆ. ಅವರು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರತಕ್ಕೆ ಐದು ಚಿನ್ನದ ಪದಕಗಳನ್ನು ತಂದಿದ್ದಾರೆ ಅದಕ್ಕೆ ನಮ್ಮಗೆಲ್ಲರಿಗೂ ಖುಷಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು.

ಮೋದಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಹಿಮಾ ದಾಸ್ “ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ನರೇಂದ್ರ ಮೋದಿ ಸರ್. ನಾನು ಹೆಚ್ಚು ಶ್ರಮವಹಿಸಿ ಭಾರತಕ್ಕಾಗಿ ಹೆಚ್ಚಿನ ಪದಕಗಳನ್ನು ತಂದು ಕೊಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಮೂರು ವಾರಗಳಲ್ಲಿ ಐದು ಚಿನ್ನದ ಪದಕ ಗೆದ್ದ ಈ 19 ವರ್ಷದ ಯುವತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಇತರ ರಾಜಕಾರಣಿಗಳು ಹಿಮಾ ದಾಸ್ ಅವರಿಗೆ ಟ್ವೀಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರಿದ್ದರು.

ಐದು ಪದಕಗಳನ್ನು ಗೆದ್ದ ಹಿಮಾ ದಾಸ್ ಅವರಿಗೆ ಸಚಿನ್ ಅವರು ಭಾನುವಾರ ಸಂಜೆ ಕರೆ ಮಾಡಿ ಶುಭಾಶಯಗಳನ್ನು ಹೇಳಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಚಿನ್ “ಧನ್ಯವಾದಗಳು ಹಿಮಾ ಇಂದು ನಿನ್ನ ಜೊತೆ ಮಾತನಾಡಿ ಖುಷಿಯಾಗಿದೆ. ಸದ್ಯದಲ್ಲೇ ನಿನ್ನನ್ನು ಭೇಟಿಯಾಗುತ್ತೇನೆ ಎಂಬ ಭರವಸೆ ಇದೆ” ಎಂದು ಹೇಳಿದ್ದರು.

ಇದಕ್ಕೆ ರೀಟ್ವೀಟ್ ಮಾಡಿರುವ ಹಿಮಾ ದಾಸ್ “ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತೇನೆ. ನಾನು ಭಾರತಕ್ಕೆ ವಾಪಸ್ ಬಂದ ಕೂಡಲೇ ನಿಮ್ಮನ್ನು ಖಂಡಿತವಾಗಿಯೂ ಭೇಟಿಯಾಗಿ ಆಶೀರ್ವಾದ ಪಡೆಯುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಐದು ಚಿನ್ನದ ಪದಕದ ಪಟ್ಟಿ:
1. ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

2. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

3. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

4. ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

5. ಈಗ ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಸಿದ್ದಾರೆ.

Leave a Reply

Your email address will not be published. Required fields are marked *