Connect with us

Latest

ಜನಾರ್ದನ ರೆಡ್ಡಿಯಿಂದ ಜಡ್ಜ್ ಡೀಲ್: ಸತ್ಯ ಬಿಚ್ಚಿಟ್ಟ ನ್ಯಾಯಮೂರ್ತಿ ಶರ್ಮಾ

Published

on

ಹೈದರಾಬಾದ್: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಜಾಮೀನಿಗಾಗಿ 40 ಕೋಟಿ ರೂ. ಆಮಿಷವೊಡ್ಡಿದ್ದ ಸತ್ಯವನ್ನು ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶ ಬಿ.ನಾಗಮಾರುತಿ ಶರ್ಮಾ ಬಹಿರಂಗಪಡಿಸಿದ್ದಾರೆ.

ಗಣಿಧಣಿ ಜನಾರ್ದನ ರೆಡ್ಡಿ 2012ರಲ್ಲಿ ಬಂಧನವಾಗಿದ್ದರು. ಈ ವೇಳೆ ರೆಡ್ಡಿ ಅವರು ಜಾಮೀನಿಗಾಗಿ ಹಣದ ಆಮಿಷವೊಡ್ಡಿದ್ದರು ಎಂದು ಶರ್ಮಾ ಅವರು ಹೈದರಾಬಾದ್‍ನ ಎಸಿಬಿ ಕೋರ್ಟಿನ ಜಡ್ಜ್ ಎದುರು ವಿವರವಾಗಿ ಹೇಳಿಕೆ ನೀಡಿದ್ದಾರೆ.

ಜನಾರ್ದನ ರೆಡ್ಡಿ ಪರವಾಗಿ ಆಂಧ್ರ ಹೈಕೋರ್ಟ್ ರಿಜಿಸ್ಟ್ರಾರ್ ನನ್ನ ಮುಂದೆ ಲಂಚದ ಪ್ರಸ್ತಾವನ್ನಿಟ್ಟಿದ್ದರು. ಆದರೆ ನಾನು ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿ ರಿಜಿಸ್ಟ್ರಾರ್ ಮನೆಯಿಂದ ಹೊರ ನಡೆದೆ ಎಂದಿದ್ದಾರೆ.

ವಿಚಿತ್ರ ಅಂದರೆ ಶರ್ಮಾ ಅವರು ಈ ಹೇಳಿಕೆ ನೀಡುವಾಗ ಜನಾರ್ದನ ರೆಡ್ಡಿ ನ್ಯಾಯಾಲಯದಲ್ಲಿ ಹಾಜರಿದ್ದರು. ನಿಷ್ಕಳಂಕ ವ್ಯಕ್ತಿತ್ವದ ನಾಗಮಾರುತಿ ಶರ್ಮಾ, ಮೊದಲಿಗೆ ರೆಡ್ಡಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ನಂತರ ಮತ್ತೊಂದು ಕೋರ್ಟಿಗೆ ವರ್ಗವಾದಾಗ ಪಟ್ಟಾಭಿರಾಮ ರಾವ್ ನೇಮಕವಾಗಿದ್ದರು. ಪಟ್ಟಾಭಿರಾಮರಾವ್ ಅವರು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಿದ್ದರು. ಆದರೆ ಕೆಲವು ದಿನಗಳ ಬಳಿಕ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಹಾಗೂ ಎಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ, ಪಟ್ಟಾಭಿರಾಮರಾವ್ ಅವರನ್ನು ಬಂಧಿಸಿ, ಜೈಲಿಗೆ ತಳ್ಳಿದ್ದರು. 2012ರಲ್ಲಿ ಸಿಬಿಐ ಅಧಿಕಾರಿಗಳು ಲಕ್ಷ್ಮಿ ನರಸಿಂಹ ರಾವ್ ಅವರನ್ನು ಬಂಧಿಸಿದ್ದರು.

ಈ ಪ್ರಕರಣದ ಸಂಬಂಧ ಬಿ.ನಾಗಮಾರುತಿ ಶರ್ಮಾ ಹೇಳಿಕೆಯನ್ನು ದಾಖಲಿಸಿಕೊಂಡ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿದೆ.