Connect with us

Bengaluru City

ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

Published

on

ಬೆಂಗಳೂರು: ಇಬ್ಬರು ವಿದ್ಯಾರ್ಥಿಗಳಿಂದಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಹೌದು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ(ನೀಟ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳ ಸೀಟ್ ಅನ್ನು ಬ್ಲಾಕ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿತ್ತು. ಈ ಸಂಬಂಧ ಆ ಇಬ್ಬರು ವಿದ್ಯಾರ್ಥಿಗಳನ್ನು ಐಟಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸೀಟ್ ಬ್ಲಾಕ್ ಆಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಮಾಹಿತಿ ಕಲೆ ಹಾಕುತ್ತಿದ್ದ ಐಟಿ ಗುರುವಾರ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:ಪರಮೇಶ್ವರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

ಈ ಕಾರಣದ ಜೊತೆ ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಬಳಿಯಿಂದ ನಗದು ರೂಪದಲ್ಲಿ ಶುಲ್ಕವನ್ನು ಕಾಲೇಜ್ ಪಾವತಿಸಿಕೊಳ್ಳುತ್ತಿದೆ. ತೆರಿಗೆಯನ್ನು ವಂಚಿಸಲೆಂದೇ ಕಾಲೇಜಿನ ಆಡಳಿತ ಮಂಡಳಿ ನಗದು ರೂಪದಲ್ಲಿ ವ್ಯವಹಾರ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಸೀಟ್ ಬ್ಲಾಕ್ ಹೇಗೆ?
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ರೀತಿಯಲ್ಲಿ ಸೀಟ್ ಗಳು ವಿದ್ಯಾರ್ಥಿಗಳಿಗೆ ಲಭ್ಯ ಇರುತ್ತದೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರಿ ಸೀಟ್ ಸಿಕ್ಕುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದವರು ಅಥವಾ ಪರೀಕ್ಷೆಯೇ ಬರೆಯದ ವಿದ್ಯಾರ್ಥಿಗಳು ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆಯುತ್ತಾರೆ. ಇದನ್ನೂ ಓದಿ:ಶಿಕ್ಷಣ ಸಂಸ್ಥೆ ಬಿಟ್ಟು, ಯಾವುದೇ ವ್ಯವಹಾರ ನಡೆಸುತ್ತಿಲ್ಲ- ಪರಮೇಶ್ವರ್

ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಲ್ಲಿ ಈ ಸೀಟ್ ಬ್ಲಾಕ್ ಅವ್ಯವಹಾರಕ್ಕೆ ಬಳಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಯೊಬ್ಬ ಯಾವುದೋ ರಾಜ್ಯದ ಕಾಲೇಜು ಸೇರುತ್ತೇನೆ ಎಂದು ಹೇಳುತ್ತಾನೆ. ಸರ್ಕಾರದ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಿದ್ಯಾರ್ಥಿ ಕಾಲೇಜಿಗೆ ದಿಢೀರ್ ಯಾವುದೋ ಕಾರಣ ನೀಡಿ ರದ್ದು ಪಡಿಸುವುದಾಗಿ ಮಾಹಿತಿ ನೀಡುತ್ತಾನೆ. ಈ ಹಂತದಲ್ಲಿ ರಾಜ್ಯ ಸರ್ಕಾರಕ್ಕೆ ಕೌನ್ಸಿಲಿಂಗ್ ನಡೆಸಿ ಮತ್ತೆ ಈ ಸೀಟ್ ಅನ್ನು ಹಂಚಿಕೆ ಮಾಡಲು ಸಾಧ್ಯವೇ ಇಲ್ಲ.

ಈ ಸಂದರ್ಭದಲ್ಲಿ ಮ್ಯಾನೇಜ್‍ಮೆಂಟ್ ಈ ಸೀಟ್ ಅನ್ನು ಬೇರೊಬ್ಬ ವಿದ್ಯಾರ್ಥಿಗೆ ಲಕ್ಷ, ಕೋಟಿ ರೂ.ಗೆ ಮಾರಾಟ ಮಾಡುತ್ತದೆ. ಸೀಟ್ ಬ್ಲಾಕ್ ಮಾಡುವ ವಿಚಾರ ಮೊದಲೇ ಪೂರ್ವ ನಿರ್ಧಾರವಾಗಿರುತ್ತದೆ. ಅಂತಿಮವಾಗಿ ದಲ್ಲಾಳಿ, ವಿದ್ಯಾರ್ಥಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಈ ತಮ್ಮ ತಮ್ಮ ಪಾಲನ್ನು ಹಂಚಿಕೊಳ್ಳುತ್ತಾರೆ. ಸೀಟ್ ಬ್ಲಾಕ್ ಅಕ್ರಮದ ಬಗ್ಗೆ ಹಿಂದೆಯೂ ಕೇಳಿ ಬಂದಿತ್ತು.