Tuesday, 12th November 2019

Recent News

ಯುವಕನ ಮುಂದೆ ಕೈ ಚಾಚಿ ಬೇಡಿಕೊಂಡೆ- ಪ್ರೇಮಿಯಿಂದ ಇರಿತಕ್ಕೊಳಗಾದ ಸ್ನೇಹಿತೆಯನ್ನು ನರ್ಸ್ ರಕ್ಷಿಸಿದ ಕಥೆ ಓದಿ

ಮಂಗಳೂರು: ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುತಿಯನ್ನು ರಕ್ಷಿಸಿದ ನರ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ನಗರದ ದೇರಳಕಟ್ಟೆಯಲ್ಲಿರುವ ಕೆಎಸ್ ಹೆಗ್ಡೆ ಆಸ್ಪತ್ರೆಯ ಹಿಂಭಾಗದ ಕಾಂಪೌಂಡ್‍ನಲ್ಲಿ ಶುಕ್ರವಾರ ಪಾಗಲ್ ಪ್ರೇಮಿ ಸುಧಾಂತ್ ತನ್ನ ಗೆಳೆತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಅಷ್ಟೇ ಅಲ್ಲದೆ ತಾನು ಕೂಡ ಜಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಚಾಕು ಹಿಡಿದು ತನ್ನ ಬಳಿ ಯಾರನ್ನೂ ಬರದಂತೆ ಭಯ ಹುಟ್ಟಿಸಿದ್ದ.

ಕೇರಳ ಮೂಲದ 24 ವರ್ಷದ ನರ್ಸ್ ಸೇವೆ ಹಾಗೂ ಪರಿಸ್ಥಿತಿಯನ್ನು ಎದುರಿಸಿದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಈ ವಿಚಾರವಾಗಿ ಎಲ್ಲರಿಗೂ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನನಗೆ ಕೆಲಸವಿದೆ ಎಂದು ಹೇಳುವ ಮೂಲಕ ಕರ್ತವ್ಯ ನಿಷ್ಠೆಯನ್ನು ಮನದಟ್ಟು ಮಾಡಿದ್ದಾರೆ.

ಈ ವಿಚಾರ ಹೇಗೆ ಗೊತ್ತಾಯಿತು ಎಂಬುದನ್ನು ವಿವರಿಸಿದ ನರ್ಸ್, ಪ್ರತಿನಿತ್ಯದಂತೆ ನಾನು ತುರ್ತುನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಜನರು ಕಿರುಚುತ್ತಿದ್ದ ಧ್ವನಿ ಕೇಳಿಸಿತು. ತಕ್ಷಣವೇ ದಾರಿಯಲ್ಲಿ ಬರುತ್ತಿದ್ದ ಜನರನ್ನು ವಿಚಾರಿಸಿದಾಗ ಘಟನೆಯ ಬಗ್ಗೆ ಗೊತ್ತಾಯಿತು ಎಂದು ನರ್ಸ್ ತಿಳಿಸಿದ್ದಾರೆ.

ಸುಶಾಂತ್ ವರ್ತನೆಯಿಂದಾಗಿ ಯಾರೊಬ್ಬರೂ ಯುವತಿಯ ರಕ್ಷಣವೇ ಹೋಗಲು ಸಾಧ್ಯವಾಗಲಿಲ್ಲ. ಆಗ ಅಂಬುಲೆನ್ಸ್ ನಲ್ಲಿ ಘಟನಾ ಸ್ಥಳಕ್ಕೆ ಬಂದ ನರ್ಸ್ ಕ್ರೂರಿ ಸುಶಾಂತ್ ಕೃತ್ಯವನ್ನು ತಡೆದಿದ್ದಾರೆ. ಪ್ರೇಯಸಿಯ ಮೇಲೆ ಬಿದ್ದಿದ್ದ ಆತನನ್ನು ಸಿಬ್ಬಂದಿಯ ಸಹಾಯದಿಂದ ಮೇಲೆತ್ತಿದರು. ಬಳಿಕ ಯುವತಿಯನ್ನು ರಕ್ಷಿಸಿದ್ದಾರೆ.

ಯುವತಿಯನ್ನು ರಕ್ಷಿಸಿದ ಬಗ್ಗೆ ವಿವರಿಸಿದ ನರ್ಸ್, ಅಪಘಾತವೆಂದು ತಿಳಿದು ನಾವು ಘಟನಾ ಸ್ಥಳಕ್ಕೆ ಅಂಬುಲೆನ್ಸ್ ನಲ್ಲಿ ಹೋಗಿದ್ದೇವು. ಅಂಬುಲೆನ್ಸ್ ನಿಲ್ಲಿಸಿ ಕೆಳಗೆ ಇಳಿದಾಗ ಚಾಕು ಹಿಡಿದು ನಿಂತಿದ್ದ ಯುವಕನನ್ನು ನೋಡಿದೆ. ಆಗ ನನಗೆ ಯಾವುದೇ ಆಲೋಚನೆ ಬರಲಿಲ್ಲ. ತಕ್ಷಣವೇ ಆತನ ಮುಂದೆ ಕೈ ಹಿಡಿದು ಬೇಡಿಕೊಂಡಾಗ, ಯುವಕ ನಮ್ಮದು ಐದು ವರ್ಷಗಳ ಸಂಬಂಧ, ಐದು ವರ್ಷಗಳ ಸಂಬಂಧ ಎಂದು ಪುನರುಚ್ಚರಿಸಿದ ಎಂದು ಹೇಳಿದರು.

ಆಸ್ಪತ್ರೆಯ ಬಾಲ್ಕನಿ ಹಾಗೂ ಘಟನಾ ಸ್ಥಳದ ಸಮೀಪದಲ್ಲಿ ಕೆಲವರು ಕೂಗಿ, ಆತನ ಬಳಿ ಹೋಗಬೇಡ. ಹುಷಾರು ಎಂದು ಎಚ್ಚರಿಸುತ್ತಿದ್ದರು. ನನ್ನ ಗಮನ ಯುವತಿಯನ್ನು ರಕ್ಷಿಸುವ ಕಡೆಗಿತ್ತು. ಸುಶಾಂತ್ ಕೆಳಗೆ ಬೀಳುತ್ತಿದ್ದಂತೆ ಯುವತಿಯನ್ನು ರಕ್ಷಿಸಿದೇವು ಎಂದು ನರ್ಸ್ ಘಟನೆಯನ್ನು ವಿವರಿಸಿದರು.

ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಅಂಬುಲೆನ್ಸ್ ನಲ್ಲಿ ಸಾಗಿಸಲಾಯಿತು. ಹೀಗಾಗಿ ಸುಶಾಂತ್‍ನನ್ನು ಮತ್ತೊಂದು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವವರೆಗೂ ಸಹೋದ್ಯೋಗಿಯ ಜೊತೆಗೆ ಘಟನಾ ಸ್ಥಳದಲ್ಲಿದ್ದೆ ಎಂದು ತಿಳಿಸಿದರು.

ತನ್ನ ಹೆಸರನ್ನು ಬಹಿರಂಗಪಡಿಸುವುದು ಬೇಡ ಎಂದು ಹೇಳಿರುವ ನರ್ಸ್, ಹೆಸರು ಬಹಿರಂಗವಾದರೆ ನನಗೆ ಕಾಲ್ ಮಾಡುತ್ತಾರೆ, ಮಾಧ್ಯಮಗಳಿಂದಲೂ ಕರೆ ಬರುತ್ತದೆ. ಇದರಿಂದ ನನ್ನ ಕೆಲಸಕ್ಕೆ ಅಡ್ಡಿ ಆಗುತ್ತದೆ ಎಂದು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಆಗಿದ್ದೇನು?:
ಆರೋಪಿ ಸುಶಾಂತ್ ಡ್ಯಾನ್ಸ್ ಕ್ಲಾಸಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ನೃತ್ಯ ಕಲಿಯಲು ಯುವತಿ ಬರುತ್ತಿದ್ದಳು. ತನ್ನನ್ನು ಪ್ರೀತಿಸುವಂತೆ ಸುಶಾಂತ್ ಯುವತಿಗೆ ಒತ್ತಯಿಸುತ್ತಿದ್ದ. ಆದರೆ ಯುವತಿ ಸುಶಾಂತ್‍ನನ್ನ ನಿರಾಕರಿಸಿದ್ದಳು. ಇತ್ತೀಚಿಗಷ್ಟೇ 50 ಸಾವಿರ ರೂ. ಖರ್ಚು ಮಾಡಿ ಯುವತಿಯ ಹುಟ್ಟುಹಬ್ಬ ಆಚರಿಸಿದ್ದ. ಇದಾದ ಮರುದಿನವೇ ಮಾನಸಿಕ ಕಿರುಕುಳದ ಆರೋಪ ಮಾಡಿ ಯುವತಿ ಸುಶಾಂತ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಸಿಟ್ಟಿಗೆದ್ದ ಆರೋಪಿ ಸುಶಾಂತ್ ಕೊಲೆಗೆ ಎರಡು ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದ. ಅದರಂತೆಯೇ ಶುಕ್ರವಾರ ಸಮಯ ನೋಡಿ ಯುವತಿಯ ಮೇಲೆ ದಾಳಿ ಮಾಡಿ 12 ಬಾರಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದ. ಸುಶಾಂತ್ ಈ ಕೃತ್ಯ ಎಸಗುವ ಮುನ್ನ ಗಾಂಜಾ ಸೇವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎನ್ನುವ ವಿಚಾರ ಲಭ್ಯವಾಗಿದೆ ಸದ್ಯಕ್ಕೆ ಆಸ್ಪತ್ರೆಯಿಂದ ಆರೋಪಿ ಸುಶಾಂತ್‍ನನ್ನು ಜೈಲ್ ವಾರ್ಡಿಗೆ ಶಿಫ್ಟ್ ಮಾಡಿದ್ದು, ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಆರೋಪಿ ಚೇತರಿಕೆಯಾಗುತ್ತಿದ್ದಾನೆ.

Leave a Reply

Your email address will not be published. Required fields are marked *