Sunday, 22nd September 2019

ಅಮಿತ್ ಶಾ ನನಗೆ ಗೊತ್ತೇ ಇಲ್ಲ: ಸುಧಾಕರ್

ನವದೆಹಲಿ: ಬಿಜೆಪಿ ರಾಷ್ಟ್ರಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾರು ಅಂತ ನನಗೆ ಗೊತ್ತೇ ಇಲ್ಲ. ನಾವು ಅಮಿತ್ ಶಾ ಅವರನ್ನ ಭೇಟಿ ಮಾಡುವುದಕ್ಕೆ ಹೋಗುತ್ತಿಲ್ಲ ಎಂದು ಅನರ್ಹ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾವು ದೆಹಲಿಗೆ ಹೋಗುತ್ತಿರುವುದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಮಾತ್ರ. ಬಿಜೆಪಿ ನಾಯಕರನ್ನು ಭೇಟಿ ಮಾಡುವುದಕ್ಕಲ್ಲ. ನಾನು ಶುಕ್ರವಾರ ದೆಹಲಿಗೆ ಹೋಗಿ ನಮ್ಮ ಸ್ನೇಹಿತರ ಜೊತೆ ಸೇರಿಕೊಳ್ಳುತ್ತೇನೆ. ಶನಿವಾರ ವಕೀಲರ ಜೊತೆ ಅರ್ಜಿ ವಿಚಾರವಾಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೇಡ, ಬೇರೆ ಯಾರಾದರೂ ಸರ್ಕಾರ ರಚಿಸಲಿ ಅಂತ ನಾವು ರಾಜೀನಾಮೆ ನೀಡಿದ್ದೇವೆ. ನಾನು ಪಕ್ಷದ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಆದರೂ ನನ್ನನ್ನು ಅನರ್ಹಗೊಳಿಸಿದ್ದಾರೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇನೆ. ಸುಪ್ರೀಂ ತೀರ್ಪು ಏನು ಬರುತ್ತೆ ಅಂತ ಕಾದು ನೋಡುಬೇಕಿದೆ ಎಂದರು.

ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕೆ ಉಂಟಾಗಿರುವ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದರ ಅವರು, ಅಸಮಾಧಾನ ಎಲ್ಲಿಲ್ಲ ಹೇಳಿ. ಎಲ್ಲಾ ಕ್ಷೇತ್ರದಲ್ಲಿಯೂ ಅಸಮಾಧಾನ ಇರುತ್ತೆ. ಅದು ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಮುಖ್ಯ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ ಮುಖಂಡರ ಕಿರುಕುಳದಿಂದ ನಿತ್ಯ ಕಣ್ಣೀರು ಹಾಕುತ್ತಿದ್ದರು ಅಂತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಆರೋಪಿಸಿದ್ದಾರೆ. ಅವರು ಮಾಜಿ ಪ್ರಧಾನಿಗಳು, ಹಿರಿಯರು, ಅವರ ಹೇಳಿಕೆ ಬಗ್ಗೆ ಏನು ಉತ್ತರ ಕೊಡುವುದಿಲ್ಲ. ದೇವೇಗೌಡ ಅವರು ಆರೋಪ ಮಾಡುತ್ತಿರುವುದು ಸಿಎಲ್‍ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ. ಈ ಆರೋಪಕ್ಕೆ ಸಿದ್ದರಾಮಯ್ಯನವರೇ ಉತ್ತರ ಕೊಟ್ಟರೆ ಉತ್ತಮ ಎಂದರು.

Leave a Reply

Your email address will not be published. Required fields are marked *