Tuesday, 17th September 2019

Recent News

ನಾನು ಜೆಡಿಎಸ್ ಬಿಟ್ಟಿರಲಿಲ್ಲ, ದೇವೇಗೌಡರೇ ನನ್ನನ್ನು ಹೊರಹಾಕಿದ್ರು – ಸಿದ್ದರಾಮಯ್ಯ

ಕಲಬುರಗಿ: ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ದೇವೇಗೌಡ ಅವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, “ನಾನು ಜೆಡಿಎಸ್ ಬಿಟ್ಟದ್ದು ಯಾಕೆ ಎಂದು ಬಿಜೆಪಿಯ ಆರ್. ಅಶೋಕ್ ಕೇಳುತ್ತಿದ್ದಾರೆ. ನಾನು ಜೆಡಿಎಸ್ ಬಿಟ್ಟಿರಲಿಲ್ಲ. ಅಹಿಂದ ಚಟುವಟಿಕೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ದೇವೇಗೌಡ ಅವರು ನನ್ನನ್ನು ಉಚ್ಚಾಟನೆ ಮಾಡಿದ್ದರು. ಡಾ. ಉಮೇಶ್ ಜಾಧವ್ ಪಕ್ಷ ಬಿಟ್ಟಿರುವುದಕ್ಕೂ ನಾನು ಜೆಡಿಎಸ್ ಬಿಟ್ಟಿರೋದಕ್ಕೂ ವ್ಯತ್ಯಾಸವಿದೆ” ಎಂದು ಹೇಳಿದರು.

ಮೈತ್ರಿಯಿಂದಾಗಿ ಪ್ಲಸ್‍ಗಿಂತ ಮೈನಸ್ ಆಗ್ತಿದೆ ಎಂದು ಕೆಆರ್ ಪೇಟೆ ಶಾಸಕ ನಾರಾಯಣಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾವೇನು ನಾರಾಯಣಗೌಡನನ್ನು ಕೇಳಿಕೊಂಡು ಮೈತ್ರಿ ಮಾಡಿಕೊಂಡಿದ್ದೇವಾ? ಅವನ ಮಾತಿಗೆಲ್ಲ ಬೆಲೆ ಕೊಡುವುದ್ದಕ್ಕೆ ಆಗಲ್ಲ ರೀ. ಹೈಕಮಾಂಡ್ ತೀರ್ಮಾನದಂತೆ ಕುಮಾರಸ್ವಾಮಿ, ದೇವೇಗೌಡರ ಜೊತೆ ಮಾತುಕತೆ ಮಾಡಿ ಸರ್ಕಾರ ರಚನೆ ಮಾಡಿದ್ದೇವೆ” ಎಂದರು.

ಮಿಸ್ಟರ್ ಯಡಿಯೂರಪ್ಪ ನಿನ್ನಿಂದ ಸರ್ಕಾರ ಬೀಳಿಸಲು ಆಗುವುದಿಲ್ಲ ಹಾಗೂ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಸಹ ಬರುವುದಿಲ್ಲ. ಅಷ್ಟಕ್ಕೂ ಶಾಸಕರನ್ನು ಖರೀದಿ ಮಾಡಲು ನಿಮ್ಮ ಹತ್ತಿರ ದುಡ್ಡು ಎಲ್ಲಿಂದ ಬರುತ್ತದೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಇತ್ತೀಚೆಗೆ ಆರ್. ಅಶೋಕ್ ಚಿಂಚೋಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಉಮೇಶ್ ಜಾಧವ್ ಅಪರೇಶನ್ ಕಮಲಕ್ಕೆ ಒಳಗಾಗಿದ್ದಾರೆ. ಹಣ ಪಡೆದು ಪಕ್ಷ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಈ ಹಿಂದೆ ಸಿದ್ದರಾಮಯ್ಯ ಅವರು ಕೂಡ ಕಾಂಗ್ರೆಸ್‍ನಿಂದ ಹಣ ಪಡೆದು ಜೆಡಿಎಸ್ ಪಕ್ಷವನ್ನು ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದ್ದರು.

Leave a Reply

Your email address will not be published. Required fields are marked *