Wednesday, 16th October 2019

Recent News

ಡಿಕೆಶಿಗೆ ನಾನು ಚಾಲೆಂಜ್ ಮಾಡಿಲ್ಲ: ಸತೀಶ್ ಜಾರಕಿಹೊಳಿ

– ಡಿ.ಕೆ.ಶಿವಕುಮಾರ್ ಕೈಕೆಳಗೆ ಕೆಲಸ ಮಾಡುತ್ತೇವೆ

ಹುಬ್ಬಳ್ಳಿ: ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನಾನು ಚಾಲೆಂಜ್ ಮಾಡಿಲ್ಲ. ಅವರು ಪ್ರಚಾರಕ್ಕೆ ಬರಬಾರದು ಅಂತ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸಂಶಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರು ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಗಮನಕ್ಕೆ ಬಂದಿತ್ತು. ಅಲ್ಲಿಯೇ ಅದಕ್ಕೆ ಸ್ಪಷ್ಟನೆ ಕೂಡ ನೀಡಿದ್ದೆ. ಈ ಹಿಂದೆ ನಡೆದಿದ್ದನ್ನು ಮರೆತು ಕುಂದಗೋಳ ಉಪ ಚುನಾವಣಾ ಪ್ರಚಾರ ನಡೆಸುತ್ತಿದ್ದೇವೆ. ಈಗ ಅವರ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಜಂಟಿ ಪ್ರಚಾರ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದೇನೆ ಅಂತ ಯಾಕೆ ಪ್ರಶ್ನೆ ಕೇಳುತ್ತೀರಿ? ನೀವೇ ಈ ಬಗ್ಗೆ ಉತ್ತರ ನೀಡಬೇಕು. ಒಂದೇ ಪಕ್ಷದಲ್ಲಿ ಇದ್ದೇವೆ, ಒಟ್ಟಾಗಿಯೇ ಹೋಗುತ್ತೇವೆ ಎಂದು ಮಾಧ್ಯಮಗಳ ವಿರುದ್ಧ ಗುಡುಗಿದರು.

ಕುಂದಗೋಳ ಉಪ ಚುನಾವಣೆ ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಇಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ನಾಯಕರು ಎನ್ನುವ ಪ್ರಶ್ನೆ ಬರುವುದಿಲ್ಲ. ಅನುಭವ ಹಾಗೂ ಸಾಮಥ್ರ್ಯ ಮುಖ್ಯವಾಗಿ ಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಅನೇಕ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಪಕ್ಷದ ನಾಯಕರು ಅವರಿಗೆ ಕುಂದಗೋಳ ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಕೈಕೆಳಗೆ ನಾವು ಕೆಲಸ ಮಾಡುತ್ತೇವೆ ಎಂದರು.

Leave a Reply

Your email address will not be published. Required fields are marked *