Connect with us

Bengaluru City

ಅವನ್ಯಾರು ನನಗೆ ಮಂತ್ರಿಗಿರಿ ಕೊಡೋಕೆ, ನಾನು ಸೇಲ್ ಆಗಿಲ್ಲ: ವಿಶ್ವನಾಥ್ ತಿರುಗೇಟು

Published

on

ಬೆಂಗಳೂರು: ಅವನ್ಯಾರು ನನಗೆ ಮಂತ್ರಿ ಸ್ಥಾನ ಕೊಡೋಕೆ? ನಾನು ಸೇಲ್ ಆಗಿಲ್ಲ ಎಂದು ವಿಶ್ವನಾಥ್ ಅವರು ಸಚಿವ ಸಾರಾ ಮಹೇಶ್ ಆರೋಪಕ್ಕೆ ಕೆಂಡಾಮಂಡಲರಾಗಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮತನಾಡಿದ ಅವರು, ನಾನು ಸಾರಾ ಮಹೇಶ್ ಆರೋಪ ಮಾಡಿರುವುದನ್ನ ನೋಡಿದೆ. ಅವರು ತೋಟದ ಮನೆ ವಿಚಾರ ನಿಜ. ಅಲ್ಲಿಗೆ ನಾನು ಸ್ನೇಹಿತನಾಗಿ ಹೋಗಿದ್ದೆ. ನಾವು ಚುನಾವಣೆಯಲ್ಲಿ ಮಾಡಿಕೊಂಡಿದ್ದಂತಹ ಸಾಲದ ಬಗ್ಗೆ ಕೂಡ ನಾವು ಮಾತನಾಡಿದ್ದೇವು. ಆದರೆ 28 ಕೋಟಿಗೆ ನಾವು ಸೇಲ್ ಆಗಿದ್ದೇವೆ ಎಂದು ಸಾರಾ ಮಹೇಶ್ ಹೇಳಿದ್ದು ನಿಜಕ್ಕೂ ಮನಸಿಗೆ ನೋವಾಯ್ತು ಎಂದರು.

ಸುಮಾರು 40 ವರ್ಷದಿಂದ ಪ್ರಮಾಣಿಕತೆಯನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ. ಈಗ ನಾನು ಸದನದಲ್ಲಿ ಇಲ್ಲವಲ್ಲ, ನಾನು ವಾಪಾಸ್ ಬಂದಮೇಲೆ ಅವರಿಗೆ ಉತ್ತರ ಕೊಡುತ್ತೇನೆ. ಸದನದಲ್ಲಿ ಓರ್ವ ಶಾಸಕ ಗೈರು ಹಾಜರಿ ಹಾಕಿರುವಾಗ ಅವರ ಬಗ್ಗೆ ಬೇರೆ ನಾಯಕರು ಈ ರೀತಿ ಮಾತನಾಡಲು ಸ್ಪೀಕರ್ ಅವಕಾಶ ಕೊಟ್ಟಿರುವುದು ಸರಿಯಲ್ಲ. ಮಾತನಾಡಲು ಬೇಕಾದಷ್ಟಿದೆ, ಸಿಎಂ ನಮ್ಮನ್ನು ಯಾವ ರೀತಿ ನಡೆಸಿಕೊಂಡರು ಎನ್ನುವ ಬಗ್ಗೆ ಆಮೇಲೆ ಹೇಳುತ್ತೇನೆ. ಸಾರಾ ಮಹೇಶ್ ಆರೋಪವನ್ನು ನಾನು ತಿರಸ್ಕಾರ ಮಾಡುತ್ತಿದ್ದೇನೆ. ಮುಂದೆ ಈ ಬಗ್ಗೆ ನಾನು ಕಾನೂನು ಹೋರಾಟವನ್ನು ಕೂಡ ಮಾಡುತ್ತೇನೆ. ಶಾಸನ ಸಭೆಯಲ್ಲೂ ಕೂಡ ಈ ಬಗ್ಗೆ ನಾನು ಪ್ರಸ್ತಾಪ ಮಾಡುತ್ತೇನೆ ಎಂದರು.

ಸಾರಾ ಮಹೇಶ್ ಅವರು ಎಲ್ಲರನ್ನೂ ಜಾತಿ ಆಧಾರದ ಮೇಲೆ ಮಾತನಾಡಿಸುತ್ತಾರೆ. ಅದಕ್ಕೆ ನಾನು ಹಲವು ಸಾರಿ ಸಿಎಂ ಬಳಿ ಈ ಬಗ್ಗೆ ಹೇಳಿದ್ದೆ, ನಿಮ್ಮ ಸಚಿವ ಸಾರಾಸಗಟಾಗಿ ಎಲ್ಲರ ಬಗ್ಗೆ ಜಾತಿ ಹಿಡಿದು ಮಾತನಾಡುತ್ತಾರೆ ಎಂದು ಗಮನಕ್ಕೆ ತಂದಿದ್ದೆ. ಸಾರಾ ಮಹೇಶ್ ಅವರು ಬರೀ ಚಾಡಿ ಹೇಳುತ್ತಾರೆ. ಸರ್ಕಾರದ ಈ ಸ್ಥಿತಿಗೆ ಅವರು ಕೂಡ ಒಂದು ರೀತಿ ನೇರ ಕಾರಣ. ಅವರ ದುರಹಂಕಾರ, ತಿಂಗಳು ತಿಂಗಳಿಗೆ ಕೊಡುತ್ತೇನೆ ತೆಗೆದುಕೊಂಡು ಹೋಗು ಅನ್ನೋಕೆ ನಮ್ಮನ್ನೆಲ್ಲಾ ಏನು ಅಂದುಕೊಂಡಿದ್ದಾನೆ ಎಂದು ಪ್ರಶ್ನಿಸಿ ಗರಂ ಆದರು.

ನಾನು ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ್ದು ಬೇರೆಯ ವಿಚಾರ. ಆ ಸಂದರ್ಭ ಬಂದಾಗ ನಾನು ಅದರ ಬಗ್ಗೆ ಮಾತನಾಡುತ್ತೆನೆ. ವಿಮಾನದಲ್ಲಿ ಹೋಗುವವರೆಲ್ಲ ಯಾರ ಹತ್ತಿರವಾದರೂ ದುಡ್ಡು ತೆಗೆದುಕೊಂಡೆ ಹೋಗುತ್ತಾರಾ? ಹಾಗೆ ಹೋಗಿ ಬರುತ್ತಾರೆ. ಅದು ಬೇರೆಯ ವಿಚಾರವಾಗುತ್ತದೆ ಎಂದು ಕಿಡಿಕಾರಿದರು. ನಾನು 28 ಕೋಟಿ ತೆಗೆದುಕೊಂಡಿರುವುದನ್ನ ಇವರು ಸಾಬೀತು ಮಾಡಲಿ. ಈ ದುಡ್ಡು ಯಾರು ಕೊಟ್ಟರು? ಇವನೆಲ್ಲಿ ಅದನ್ನು ನೋಡಿದ? ಎನ್ನುವುದನ್ನ ಸಾಬೀತು ಮಾಡಲಿ. ನಾನು ಸಾಲ ಮಾಡಿದ್ದು ನಿಜ, ಇವತ್ತಿಗೂ ಸಾಲ ಇದೆ. ಚುನಾವಣೆ ಸಾಲ ಮಾಡದಿದ್ದರೆ ಹೇಗೆ ಆಗುತ್ತೆ. ಪಾಪ ಸಾರಾ ಮಹೇಶ್ ಕರಿಯುತ್ತಿದ್ದಾರೆ ಅಂತ ತೋಟಕ್ಕೆ ಹೋದೆ. ಆಗ ನಿಮ್ಮ ಸಾಲ ಇದ್ದರೆ ತೀರಿಸು ಎಂದು ಸಿಎಂ ನನಗೆ ಹೇಳಿದ್ದಾರೆ ಎಂದರು. ಇವೆಲ್ಲಾ ವಿಚಾರ ಸಿಎಂ ಅವರಿಗೂ ಗೊತ್ತಿದೆ ಎಂದು ಏಕವಚನದಲ್ಲೆ ವಾಗ್ದಾಳಿ ನಡೆಸಿದರು.

ಆದ್ರೆ ನಮ್ಮ ಅಸಹಾಯಕತೆಯನ್ನ ಇವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಂತ್ರಿ ಸ್ಥಾನ ಬೇಕು ಅಂತ ನನಗೆ ಕೇಳೋಕೆ ಇವನ್ಯಾರು? ಮುಖ್ಯಮಂತ್ರಿನಾ? ನಾನು ಮೊದಲೆ ಹೇಳಿದ್ದೆ ನನಗೆ ಮಂತ್ರಿಗಿರಿ ಬೇಡ ಎಂದು ಸಿಎಂಗೆ ಹೇಳಿದ್ದೆ. ಸರ್ಕಾರದಲ್ಲಿ ನಿಮ್ಮ ಜೊತೆ ನಿಂತು ಕೆಲಸ ಮಾಡಲು ಇಷ್ಟ ಪಡುತ್ತೇನೆ ಆದ್ರೆ ಸಚಿವ ಸ್ಥಾನ ಬೇಡ ಅಂದಿದ್ದೆ.

ಏನು ನಡಿತೋ, ಏನು ಗೊತ್ತಾಯ್ತೋ. ಇವರು ಮಾತ್ರ ಸುಳ್ಳಿನ ಕಂತೆ ಹೇಳಿಕೊಂಡು ಇದ್ದಾರೆ. ಇವತ್ತಿನ ಸದನದಲ್ಲಿ ಯಾರು ಯಾರ ಮೇಲೆ ಆರೋಪ ಮಾಡಬೇಕು ಅನ್ನೊದನ್ನ ನಿರ್ಧರಿಸಿಕೊಂಡು ಬಂದ ಹಾಗೆ ಇದೆ. ಸಿಎಂ ಗೆ ಎಲ್ಲಾ ಮಾಹಿತಿ ಗೊತ್ತಿದ್ದರೆ ಇಟ್ಟುಕೊಟ್ಟಲಿ. ಇಲ್ಲವಾದರೆ ಜನರಿಗೆ ಹೇಳಲಿ ಅದಕ್ಕೇನು? ನಾನು ಸ್ವತಂತ್ರ ವ್ಯಕ್ತಿ. ನಾನು ಎಲ್ಲಿಗೆ ಹೋಗಿದ್ದೆ ಎಂದು ಕೇಳಲು ಇವರ್ಯಾರು? ನಾನು ಸ್ವಚ್ಛವಾಗಿದ್ದೆನೆ, ನನಗೆ ಬೆರಳು ಮಾಡಿ ಹೇಳುವಂತ ಕೆಲಸವನ್ನ ನಾನು ಮಾಡಿಲ್ಲ. ಇಲ್ಲಿ ಶಕ್ತಿವಂತನಲ್ಲದಿದ್ದರೂ ಪ್ರಾಮಾಣಿಕತೆಯಿಂದ ಬದುಕುವವರ ಪಟ್ಟಿಯಲ್ಲಿ ನಾನಿದ್ದೇನೆ. ನನ್ನ ಮೇಲೆ ಆರೋಪ ಮಾಡಿದಕ್ಕೆ ಸಿಎಂ ಹಾಗೂ ಮಹೇಶ್ ಮೇಲೆ ನನಗೆ ಬೇಸರವಾಯ್ತು. ಸಾರಾ ಮಹೇಶ್ ಅವರಿಂದ ನನ್ನ ವಿರುದ್ಧ ಆರೋಪ ಮಾಡುವಂತೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.

ಇವತ್ತು ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ನಾನು ಕಾನೂನಾತ್ಮಕವಾಗಿ ಹೋರಾಡುತ್ತೇನೆ. ಮಹೇಶ್ ಸವಾಲು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದರು.

ಸಾರಾ ಮಹೇಶ್ ಹೇಳಿದ್ದೇನು?

ವಿಶ್ವನಾಥ್‍ಗೆ ಬಿಜೆಪಿ ಅವರು 28 ಕೋಟಿ ರೂ. ಆಫರ್ ಕೊಟ್ಟಿದ್ದಾರೆ ಎಂದು ಸಾರಾ ಮಹೇಶ್ ಗಂಭೀರವಾಗಿ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲು ಅಂದರೆ ನಾಲ್ಕು ತಿಂಗಳ ಹಿಂದೆ ಅವರೇ, “ಪ್ರತಿಪಕ್ಷಗಳಿಗೆ ಅಧಿಕಾರ ಹಿಡಿಯುವ ಹಂಬಲ, ಕಾತುರ ಇರುವುದು ಸಹಜವಾಗಿದೆ. ಆದರೆ ಅದಕ್ಕಾಗಿ ವಾಮ ಮಾರ್ಗ ಹಿಡಿಯುವುದು ಸರಿಯಿಲ್ಲ. ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಅದನ್ನು ಉರುಳಿಸುತ್ತಿರುವ ಪ್ರಯತ್ನಕ್ಕೆ ಕೈ ಹಾಕುತ್ತಿರುವುದು ಬಿಜೆಪಿಗೆ ಶೋಭೆ ತರುವುದಲ್ಲ. ಅದೇ ರೀತಿ ಕಪ್ಪು ಹಣ ಉಪಯೋಗಿಸಬಾರದು” ಎಂದು ಹೇಳಿಕೆ ಕೊಟ್ಟಿದ್ದರು.

ಆದರೆ ನಾನು ಅಮೆರಿಕಕ್ಕೆ ಹೋಗುವ ಮೊದಲು ಸಾ.ರಾ ಮಹೇಶ್ ಸರಿಯಿಲ್ಲ. ಅವರ ಧೋರಣೆಗೆ ಬೇಸತ್ತು ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಆಗ ನಾನು ಅವರನ್ನು ತೋಟಕ್ಕೆ ಕರೆಸಿ, ಏನ್ ಸರ್ ಮಂತ್ರಿ ಆಗಬೇಕೆಂಬ ಆಸೆ ಇದೆಯೇ ಹೇಳಿ ಸರ್ ಎಂದು ಕೇಳಿದೆ. ಅದಕ್ಕೆ ಅವರು ಇಲ್ಲ, ಇಲ್ಲ ನನಗೆ ಅದೇನು ಬೇಡ ಎಂದರು. ಅದಕ್ಕೆ ನಾನು ಮತ್ತೆ ಬೇರೆ ಏನ್ ಬೇಕು ಹೇಳಿ ಸರ್ ಎಂದು ಕೇಳಿದೆ. ಅದಕ್ಕೆ ಅವರು ಚುನಾವಣೆಗೆ ನಾನು ಸಾಲ ಮಾಡಿಕೊಂಡಿದ್ದೇನೆ. ಅದರಿಂದ ಸಮಸ್ಯೆಯಾಗಿದೆ ಎಂದಿದ್ದರು.

ಇದೇ ವೇಳೆ ಅವರು, ನನ್ನನ್ನು ಬಿಜೆಪಿಯವರು ಕರೆದಿದ್ದರು. ಜೊತೆಗೆ 28 ಕೋಟಿ ರೂ. ಕೊಡುತ್ತೇನೆ ಎಂದಿದ್ದಾರೆ. ಆದರೆ ದೇವೇಗೌಡರು ಈ ಕಾಲದಲ್ಲಿ ನನ್ನನ್ನು ನಂಬಿ ಮೂಲೆಯಲ್ಲಿ ಇದ್ದವನ ಕರೆದುಕೊಂಡು ಬಂದು ಶಾಸಕನ ಸ್ಥಾನ ಕೊಟ್ಟರು. ಅವರಿಗೆ ಮೋಸ ಮಾಡಲ್ಲ ಎಂದಿದ್ದೇನೆ. ನೀವು ಸಾಲ ತೀರಿಸಲು ಒಂದು ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು. ಬೇಕಿದ್ದರೆ ಅವರನ್ನು ಕರೆಸಿ ಇಲ್ಲೆ ಕೇಳಿ ನಾನು ಹೇಳುತ್ತಿರುವುದು ಸತ್ಯ. ಇಲ್ಲವಾದಲ್ಲಿ ಇನ್ಮುಂದೆ ಯಾವತ್ತು ಬಿಳಿ ಬಟ್ಟೆ ಹಾಕಲ್ಲ. ಕೈ ಮುಗಿದು ಸಾರ್ವಜನಿಕರ ಮುಂದೆ ವೋಟು ಕೇಳಲ್ಲ ಎಂದು ಮಹೇಶ್ ಶಪಥ ಮಾಡಿದರು.