Saturday, 7th December 2019

ನಾನು ಕಪಟಿಯಲ್ಲ ದೇಶಭಕ್ತೆ- ಪಾಕ್ ಮಹಿಳೆಗೆ ಪ್ರಿಯಾಂಕಾ ತಿರುಗೇಟು

ಲಾಸ್ ಎಂಜಲೀಸ್: ಪಾಕಿಸ್ತಾನದ ಮಹಿಳೆಯೊಬ್ಬರು ನಟಿ ಪ್ರಿಯಾಂಕಾ ಚೋಪ್ರಾರ ಜೈ ಹಿಂದ್ ಟ್ವೀಟ್ ಬಗ್ಗೆ ಪ್ರಶ್ನಿಸಿ, ಕಪಟಿ ಎಂದು ಕಿಡಿಕಾರಿದ್ದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ನಾನು ಕಪಟಿಯಲ್ಲಿ ದೇಶಭಕ್ತೆ ಎಂದು ತಿರುಗೇಟು ನೀಡಿದ್ದಾರೆ.

ಶನಿವಾರದಂದು ಲಾಸ್ ಎಂಜಲೀಸ್‍ನಲ್ಲಿ ನಡೆದ ಬ್ಯೂಟಿಕಾನ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೂತು ಪ್ರಿಯಾಂಕಾ ಜನರೊಂದಿಗೆ ಸಂವಾದ ಮಾಡುತ್ತಿದ್ದ ವೇಳೆ ಪಾಕಿಸ್ತಾನಿ ಮಹಿಳೆಯೊಬ್ಬರು ಅವರ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ನೀವು ಭಾರತ ಪಾಕ್ ಮೇಲೆ ದಾಳಿ ನಡೆಸಿದಾಗ ‘ಜೈ ಹಿಂದ್ ಇಂಡಿಯನ್ ಆಮ್ರ್ಡ್ ಫೋರ್ಸ್’ ಎಂದು ಟ್ವೀಟ್ ಮಾಡಿದ್ದೀರಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಗಳ ನಡುವೆ ಶಾಂತಿಯನ್ನು ಕಾಪಾಡುವ ಬದಲು ಪಾಕಿಸ್ತಾನದ ಮೇಲೆ ನಡೆದ ಪರಮಾಣು ಯುದ್ಧಕ್ಕೆ ಪೋತ್ಸಾಹ ನೀಡಿದ್ದೀರಿ. ನಮ್ಮಂತ ಲಕ್ಷಾಂತರ ಮಂದಿ ಪಾಕಿಸ್ತಾನಿಯರು ನಿಮ್ಮ ಕೆಲಸಕ್ಕೆ ಪ್ರೋತ್ಸಾಹಿಸಿದ್ದರು. ಆದರೆ ನೀವು ಹೀಗೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿ ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ನನಗೆ ಸಾಕಷ್ಟು ಮಂದಿ ಪಾಕಿಸ್ತಾನಿ ಸ್ನೇಹಿತರು ಇದ್ದಾರೆ. ಆದರೆ ನಾನು ಭಾರತದವಳು. ಯುದ್ಧ ನಿಜಕ್ಕೂ ನನಗೆ ಇಷ್ಟವಾದ ವಿಷಯವಲ್ಲ ಆದರೆ ನಾನು ದೇಶಭಕ್ತೆ. ನನ್ನನ್ನು ಪ್ರೀತಿಸುವ ಜನರ ಭಾವನೆಗಳಿಗೆ ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದರು. ಹಾಗೆಯೇ ನನ್ನ ಪ್ರಕಾರ ನಾವೆಲ್ಲರು ಒಂದು ರೀತಿಯ ಮಧ್ಯಮ ನೆಲವನ್ನು ಹೊಂದಿದ್ದೇವೆ. ನೀವು ಬಹುಶಃ ಹಾಗೆ ತಿಳಿದಿರಬಹುದು. ನೀವು ನನ್ನ ಬಳಿ ಬಂದು ದಯವಿಟ್ಟು ಕೂಗಬೇಡಿ. ನಾವೆಲ್ಲರು ಇಲ್ಲಿ ಪ್ರೀತಿ ಸಂದೇಶ ಸಾರಲು ಸೇರಿದ್ದೇವೆ ಎಂದು ಪಾಕ್ ಮಹಿಳೆಗೆ ತಿರುಗೇಟು ನೀಡಿದರು.

ಜೈಷ್ ಉಗ್ರರು ಫೆ. 14ರಂದು ಪುಲ್ವಾಮದಲ್ಲಿ ಭಾರತೀಯ ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಫೆ. 26ರಂದು ಪಾಕಿಸ್ತಾನದ ಜೈಷ್ ಉಗ್ರ ಸಂಘಟನೆಯ ತರಬೇತಿ ನೆಲಗಳ ಮೇಲೆ ಭಾರತ ಏರ್‌ಸ್ಟ್ರೈಕ್  ನಡೆಸಿತ್ತು. ಹೀಗಾಗಿ ಅಂದು ಪ್ರಿಯಾಂಕಾ ‘ಜೈ ಹಿಂದ್ ಇಂಡಿಯನ್ ಆಮ್ರ್ಡ್ ಫೋರ್ಸ್’ ಎಂದು ಬರೆದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಭಾರತೀಯರು ಮೆಚ್ಚುಗೆ ಸೂಚಿಸಿದ್ದರು.

Leave a Reply

Your email address will not be published. Required fields are marked *