Connect with us

Cinema

3ಡಿಯಲ್ಲಿ ಬರಲಿದ್ದಾನೆ ಮಗಧೀರ?

Published

on

ಹೈದರಾಬಾದ್: ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಹಾಗೂ ನಿರ್ದೇಶಕ ಶಂಕರ್ ಕಾಂಬೀನೇಷನ್‍ನಲ್ಲಿ ಬರುತ್ತಿರುವ ಸಿನಿಮಾವನ್ನು 3ಡಿಯಲ್ಲಿ ಚಿತ್ರೀಕರಿಸುವ ಸಾಧ್ಯತೆ ಇದೆ. ನಟ ರಾಮ್ ಚರಣ್ ತೇಜರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಫೆಬ್ರವರಿ 12ರಂದು ಘೋಷಿಸಿದ್ದರು. ಇದೊಂದು ಐತಿಹಾಸಿಕ ಕಥೆ ಆಧಾರಿತ ಸಿನಿಮಾವಾಗಿದ್ದು, ಬಹುಶಃ 2022ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಸಿಕ್ವೆನ್ಸ್‍ಗಳಿದ್ದು, ಪ್ರೇಕ್ಷಕರು 3ಡಿಯಲ್ಲಿ ನೋಡಲು ಹೆಚ್ಚಾಗಿ ಬಯಸಬಹುದು. ಹಾಗಾಗಿ ಸಿನಿಮಾವನ್ನು 3ಡಿಯಲ್ಲಿ ಚಿತ್ರೀಕರಿಸಲು ನಿರ್ದೇಶಕ ಶಂಕರ್ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಹಿಂದೆ ಶಂಕರ್‍ರವರು ನಿರ್ದೇಶಿಸಿದ್ದ 2.0 ಸಿನಿಮಾವನ್ನು 3ಡಿಯಲ್ಲಿ ಬಿಡುಗಡೆ ಆಗಿತ್ತು.

ಇದು ಮಲ್ಟಿಸ್ಟಾರ್ ಸಿನಿಮಾವಾದ್ದರಿಂದ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಐದು ಭಾಷೆಗಳಲ್ಲಿ ಚಿತ್ರೀಕರಿಸಲಾಗುವುದು ಮತ್ತು ಚಿತ್ರಕ್ಕಾಗಿ ಹೈದರಾಬಾದ್‍ನಲ್ಲಿ ಬೃಹತ್ ಸೆಟ್ ನಿರ್ಮಿಸಲು ಚಿತ್ರತಂಡ ಚಿಂತನೆ ನಡೆಸಿದೆ. ಇನ್ನೂ ಸಿನಿಮಾಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್ ವಿಜಯ್ ಸೇತುಪತಿ ಮತ್ತು ಇನ್ನಿತರ ಖ್ಯಾತ ನಟರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿನಿಮಾ ಕುರಿತಂತೆ ನಿರ್ಮಾಪಕ ದಿಲ್ ರಾಜು, ಭಾರತದ ಅತ್ಯುತ್ತಮ ನಟ ರಾಮ್ ಚರಣ್ ತೇಜ ಮತ್ತು ನಿರ್ದೇಶಕ ಶಂಕರ್ ಷಣ್ಮುಗಮ್ ಅವರೊಂದಿಗೆ ಸಿನಿಮಾಕ್ಕಾಗಿ ಕೈ ಜೋಡಿಸುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ಜನಸಾಮಾನ್ಯರನ್ನು ರಂಜಿಸುವ ಸಲುವಾಗಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪ್ರೇಕ್ಷಕರೆದುರಿಗೆ ತರಲಿದ್ದೇವೆ ಎಂದು ತಿಳಿಸಿದ್ದರು. ಅಲ್ಲದೆ ಇದು ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿರುವ 50ನೇ ಸಿನಿಮಾವಾಗಿದೆ.

ಸದ್ಯ ನಿರ್ದೇಶಕ ಶಂಕರ್ ನಟ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇಂಡಿಯನ್ 2 ಸಿನಿಮಾ 1996ರಲ್ಲಿ ತೆರೆ ಕಂಡ ಬ್ಲಾಕ್ ಬಾಸ್ಟರ್ ಇಂಡಿಯನ್ ಸಿನಿಮಾದ ಮುಂದುವರಿದ ಭಾಗವಾಗಿದ್ದು, ಈ ಸಿನಿಮಾದಲ್ಲಿ ಕಮಲ್ ಹಾಸನ್, ಸಿದ್ದಾರ್ಥ್, ಕಾಜಲ್ ಅಗರ್‍ವಾಲ್,ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭಾವನಿ ಶಂಕರ್ ಮತ್ತು ವಿವೇಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟ ರಾಮ್‍ಚರಣ್ ಪ್ರಸ್ತುತ ನಿರ್ದೇಶಕ ರಾಜಮೌಳಿ ನಿರ್ದೇಶಿಸುತ್ತಿರುವ ಆರ್‍ಆರ್‍ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸಿದ್ದು, ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಾಮ ಭೀಮ್ ಜೀವನಾದಾರಿತ ಸಿನಿಮಾವಾಗಿದೆ. ಅಲ್ಲದೆ ಈ ಸಿನಿಮಾಕ್ಕೆ ಬರೋಬ್ಬರಿ 400 ಕೋಟಿ ಬಂಡಾವಾಳ ಹೂಡಿದ್ದು, ನಟ ಅಜಯ್ ದೇವ್‍ಗನ್, ಅಲಿಯಾ ಭಟ್, ಸಮುತ್ರಿಕಣಿ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

Click to comment

Leave a Reply

Your email address will not be published. Required fields are marked *