Connect with us

Dharwad

ಹುಬ್ಬಳ್ಳಿ, ಹೈದರಾಬಾದ್ ನಡುವಿನ ವಿಮಾನ ಪಯಣಕ್ಕೆ ಹಸಿರು ನಿಶಾನೆ

Published

on

ಹುಬ್ಬಳ್ಳಿ: ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸುಸಜ್ಜಿತ ನಿಲ್ದಾಣವನ್ನಾಗಿ ಮಾರ್ಪಡಿಸಿದೆ. ಹುಬ್ಬಳ್ಳಿಯಿಂದ ಹೈದರಾಬಾದ್ ನಗರಕ್ಕೆ ವಿಮಾನಯಾನ ಸೇವೆ ಅವಶ್ಯಕತೆ ಇತ್ತು. ಬಹುದಿನ ಬೇಡಿಕೆಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಲೈಯನ್ಸ್ ಏರ್ ವೇಸ್ ನಿಂದ ಹೈದರಾಬಾದ್ ನಗರಕ್ಕೆ ಆರಂಭಿಸಲಾದ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾರದಲ್ಲಿ ಮೂರು ದಿನ ಹೈದರಾಬಾದ್ ನಗರಕ್ಕೆ ವಿಮಾನ ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಮುಂದಿನ ದಿನಗಳಲ್ಲಿ ವಾರದ ಏಳು ದಿನವೂ ಸೇವೆ ವಿಸ್ತರಿಸಲಾಗುವುದು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯವರ ವಿಶೇಷ ಪ್ರಯತ್ನದಿಂದ ಹೈದರಾಬಾದ್ ನಗರಕ್ಕೆ ವಿಮಾನ ಯಾನ ಸೇವೆ ಆರಂಭವಾಗಿದೆ. ಅವರಿಗೆ ವಿಶೇಷ ಧನ್ಯವಾದಗಳು. ಹುಬ್ಬಳ್ಳಿ ಮಂಗಳೂರಿಗೆ ನಡುವೆ ವಿಮಾನ ಸಂಪರ್ಕ ಕಲ್ಪಿಸಲು ಬೇಡಿಕೆ ಇದೆ. ಇದನ್ನು ಸಹ ಶೀಘ್ರವಾಗಿ ಪ್ರಾರಂಭಿಸಲಾಗುವುದು.

ಹುಬ್ಬಳ್ಳಿಯಲ್ಲಿ ರಾತ್ರಿ ಸಹ ವಿಮಾನ ಇಳಿಯಲು ಅವಕಾಶವಿದೆ. ಸ್ವಯಂ ಚಾಲಿತ ಲ್ಯಾಂಡಿಗ್ ಗೆ ವ್ಯವಸ್ಥೆಯಿದೆ. ಈಗಿನ ರನ್ ವೇ ಟ್ರಾಕ್ ವಿಸ್ತರಣೆ ಮಾಡಲಾಗುವುದು. ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ನೇರವಾಗಿ ವಿಮಾನ ಸೌಲಭ್ಯ ಕಲ್ಪಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ರನ್ ವೇ ವಿಸ್ತರಿಸಿದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳು ಆರಂಭವಾಗಲಿವೆ. ಈಗಾಗಲೇ ಮುಂಬೈ, ಅಹಮದಾಬಾದ್, ಕೊಚ್ಚಿ, ಕೊಣ್ಣೂರ್, ಗೋವಾಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗಿದೆ. ಕೊರೊನಾ ನಂತರದ ಸ್ಥಿತಿಗತಿಗಳನ್ನು ನೋಡಿಕೊಂಡು ಇತರೆ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಾಗುವುದು. ಟ್ರೂ ಜಟ್ ಮಾಲೀಕರೊಂದಿಗೆ ಹೆಚ್ಚಿನ ವಿಮಾನ ಸಂಪರ್ಕ ಕಲ್ಪಿಸುವಂತೆ ಮಾತುಕತೆ ನಡೆಸಲಾಗಿದೆ ಎಂದರು.

ಅಲೈಯನ್ಸ್ ಏರವೇಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಪ್ರ್ರೀತ್ ಎ ಡಿ ಸಿಂಗ್ ಮಾತನಾಡಿ, ಏರ್ ಇಂಡಿಯಾ ಭಾರತೀಯರ ಹೃದಯವನ್ನು ಬೆಸೆಯುವ ಕಾರ್ಯ ಮಾಡುತ್ತಿದೆ. ಹುಬ್ಬಳ್ಳಿ ಮಹತ್ವದ ನಗರವಾಗಿದ್ದು ವಿಮಾನಯಾನ ಸಂಪರ್ಕದ ಅವಶ್ಯಕತೆ ಇದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನವಿ ಮೇರೆಗೆ ಹೈದರಾಬಾದ್ ನಗರಕ್ಕೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕರ್ನಾಟಕ ಹಾಗೂ ತೆಲಂಗಾಣದ ಮಧ್ಯದ ಬಾಂಧವ್ಯ ವೃದ್ಧಿಯಾಗಲಿದೆ. ಅಲೈಯನ್ಸ್ ಏರ್ ವೇಸ್ ಗೋರಖ್ ಪುರ ದಿಂದ ಲಕ್ನೋ, ಬರೇಲಿಯಿಂದ ದೆಹಲಿ, ಬಿಲಾಸಪುರ್ ಜಬಲ್ ಪುರ್ ಹೀಗೆ ಹಲವು ನಗರಗಳಲ್ಲಿ ವಿಮಾನಯಾನ ಸೌಲಭ್ಯ ವಿಸ್ತರಿಸಿದೆ. ದಕ್ಷಿಣ ಭಾರತದಲ್ಲಿ ಮೈಸೂರುನಿಂದ ಮಂಗಳೂರು, ಕ್ಯಾಲಿಕಟ್, ಕಲಬುರ್ಗಿಯಿಂದ ಮುಂಬೈ ಹೀಗೆ ನಾನಾ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಹೆಚ್ ಎ ಎಲ್ ನೊಂದಿಗೆ ನಾಗರಿಕ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ್ ಠಾಕರೆ, ವಿಮಾನ ನಿಲ್ದಾಣ ಭದ್ರತಾಧಿಕಾರಿ ಜಗದೀಶ್ ಹಂಚಿನಾಳ್, ಏರ್ ಇಂಡಿಯಾ ಸಿಬ್ಬಂದಿ ನಾಗೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *