Wednesday, 26th June 2019

ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

ಹೈದರಾಬಾದ್: ಮದುವೆಯಾದ ಮೊದಲ ರಾತ್ರಿಯೇ ಗಂಡನೊಬ್ಬ ಪತ್ನಿಯ ಜೊತೆ ರಾಕ್ಷಸನಂತೆ ನಡೆದುಕೊಂಡು ಆಕೆಯನ್ನು ಹಿಂಸಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಮೋತರಂಗನಪಲ್ಲಿ ಗ್ರಾಮದ ಗಂಗಾಧರ ನೆಲ್ಲೂರು ಬ್ಲಾಕ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪತ್ನಿಯನ್ನ ಚೂರಿಯಿಂದ ಇರಿದು, ದೇಹದ ಭಾಗಗಳನ್ನು ಕಚ್ಚಿ, ಮುಖ ಮತ್ತು ಸೂಕ್ಷ್ಮ ಭಾಗಗಳನ್ನ ಗುದ್ದಿ ಪತಿ ವಿಕೃತಿ ಮೆರೆದಿದ್ದಾನೆ.

ಹಲ್ಲೆಗೊಳಗಾದ 24 ವರ್ಷದ ನವವಿವಾಹಿತೆಯ ಸ್ಥಿತಿ ಗಂಭೀರವಾಗಿದ್ದು, ಚಿತ್ತೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರದಂದು ರಾಕ್ಷಸ ಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಡೆದಿದ್ದೇನು: ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಆರೋಪಿಗೆ ಎಂಬಿಎ ಪದವೀಧರೆಯ ಜೊತೆ ಗುರುವಾರ ಮದುವೆಯಾಗಿತ್ತು. ವರದಕ್ಷಿಣೆ ಎಂದು ಹುಡುಗಿಯ ಕುಟುಂಬಸ್ಥರು 1 ಕೋಟಿ ರೂ. ಕೊಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಶುಕ್ರವಾರ ಮೊದಲ ರಾತ್ರಿ ಏರ್ಪಡಿಸಿದ್ದರು. ವಧು ಪತಿಯ ರೂಮಿಗೆ ಹೋಗಿದ್ದಾರೆ. ಆಕೆ ರೂಮಿಗೆ ಬರುತ್ತಿದ್ದಂತೆ ಆರೋಪಿ ಏಕಾಏಕಿ ಮುಖಕ್ಕೆ ಹೊಡೆಯಲು ಆರಂಭಿಸಿದ್ದಾನೆ. ನಂತರ ಚಾಕುವಿನಿಂದ ಇರಿದು, ಅಂಗಾಂಗಗಳನ್ನ ಕಚ್ಚಿದ್ದಲ್ಲದೆ ಸೂಕ್ಷ್ಮ ಭಾಗಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆಂದು ವಧು ಹೇಳಿದ್ದಾರೆ. ಪ್ರಾಣಾಪಾಯದ ಭಯದಿಂದ ವಧು ಕೂಡಲೇ ರೂಮಿನಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ.

ನನ್ನ ಮಗಳು ಹೇಗೋ ಅವನಿಂದ ತಪ್ಪಿಸಿಕೊಂಡು ರೂಮಿನಿಂದ ಹೊರಗೆ ಬಂದಳು. ಹೊರ ಬಂದಾಗ ಅವಳು ಗಾಬರಿಯಾಗಿದ್ದಳು. ಮುಖವೆಲ್ಲಾ ಊದಿಕೊಂಡಿತ್ತು. ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು ಎಂದು ವಧುವಿನ ತಾಯಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *