Connect with us

Crime

ಕಲ್ಲಿನಿಂದ ಜಜ್ಜಿ ಯುವಕನ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಗೆಳೆಯರು..!

Published

on

ಹೈದರಾಬಾದ್: ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ರಾಜೇಂದ್ರ ನಗರದಲ್ಲಿ ರಸ್ತೆ ಬದಿಯಲಿದ್ದ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ.

ಮೃತ ದುರ್ದೈವಿಯನ್ನು ಮೊಹಮ್ಮದ್ ಇಲಿಯಾಜ್ ಅಲಿಯಾಸ್ ರಿಯಾಜ್(24) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಚಂದ್ರಯನಗುತ್ತದಲ್ಲಿರುವ ತನ್ನ ನಿವಾಸದಿಂದ ಹೊರ ಬಂದವನು ಮತ್ತೆ ಮನೆಗೆ ಹಿಂದಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಶನಿವಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಕ್ರಿಮಿನಲ್ ಬ್ಯಾಗ್ರೌಂಡ್ ಇರುವ ರಿಯಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ತನಿಖೆ ನಡೆಸಲು ಆರಂಭಿಸಿದ್ದಾರೆ.

ಇತ್ತ ರಿಯಾಜ್ ಕುಟುಂಬಸ್ಥರು ಕೂಡ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಾಜೇಂದ್ರನಗರ ವ್ಯಾಪ್ತಿಯಲ್ಲಿ ರಿಯಾಜ್ ಆಟೋ ಸಿಕ್ಕಿದೆ. ಹೀಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಶುಕ್ರವಾರ ರಾತ್ರಿ ಇಬ್ಬರೊಂದಿಗೆ ರಿಯಾಜ್ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಆ ಇಬ್ಬರನ್ನು ಸೈಯದ್ ಹಾಗೂ ಫಿರೋಜ್ ಎಂದು ಕುಟುಂಬಸ್ಥರು ಗುರುತು ಹಿಡಿದಿದ್ದಾರೆ.

ಈ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಆಗ ಇಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರಿಯಾಜ್ ನನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ರಸ್ತೆ ಬದಿ ಎಸೆದು ಹೋಗಿರುವುದಾಗಿ ಆರೋಪಿಗಳು ಪೊಲೀಸರ ಬಳಿ ತಿಳಿಸಿದ್ದಾರೆ.

ಆರೋಪಿಗಳ ಹೇಳಿಕೆ ಆಧರಿಸಿ ಅವರೊಂದಿಗೆ ಪೊಲೀಸರು ಕೂಡ ಸೂಟ್ ಕೇಸ್ ಇದ್ದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಸೂಟ್ ಕೇಸ್ ತೆರೆದು ನೋಡಿದಾಗ ರಿಯಾಜ್ ಮೃತದೇಹ ಪೀಸ್ ಪೀಸ್ ಆಗಿತ್ತು. ಆರೋಪಿಗಳು ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕೂಡ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದು, ರಿಯಾಜ್ ಮನೆಯ ಆಸು-ಪಾಸು ಮನೆಯವರಾಗಿದ್ದಾರೆ. ಸೈಯದ್ ಸಹೋದರಿಗೆ ರಿಯಾಜ್ ತಮಾಷೆ ಮಾಡುತ್ತಿದ್ದನು. ಇದೇ ವಿಚಾರ ಕೊಲೆ ಕಾರಣ ಎಂಬುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಶುಕ್ರವಾರ ರಿಯಾಜ್ ಹಾಗೂ ಆರೋಪಿಗಳು ಕಂಠಪೂರ್ತಿ ಕುಡಿದಿದ್ದರು. ಬಳಿಕ ಮೂವರು ಕೂಡ ರಿಕ್ಷಾದಲ್ಲಿ ತೆರಳಿದ್ದಾರೆ. ಹೀಗೆ ಹೋಗುತ್ತಿದ್ದಾಗ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಸೈಯದ್ ಹಾಗೂ ಫಿರೋಜ್, ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿ ರಸ್ತೆ ಬಿಸಾಕಿ ಹೋಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in