Recent News

ಅಳಿಯನಾಗಿ ಒಪ್ಪಿಕೊಳ್ಳುತ್ತೇನೆ ಎಂದು ಮನೆಗೆ ಬಂದು ಹಲ್ಲೆಗೈದ ಮಾವ

ಹೈದರಾಬಾದ್: ಅಳಿಯನಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿ ಮನೆಗೆ ಬಂದು ಮಗಳ ಗಂಡನ ಮೇಲೆಯೇ ಹಲ್ಲೆಗೈದ ಘಟನೆಯೊಂದು ಹೈದರಾಬಾದ್ ನ ಎಸ್.ಆರ್ ನಗರ ಪ್ರದೇಶದಲ್ಲಿ ನಡೆದಿದೆ.

ಇಮ್ತಿಯಾಜ್(21) ಹಲ್ಲೆಗೊಳಗಾದ ಅಳಿಯ. ತನ್ನ ಪತ್ನಿಯ ತಂದೆ ಹಾಗೂ ಸಂಬಧಿಕರು ಬಂದು ಶುಕ್ರವಾರ ಇಮ್ತಿಯಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಪೋಷಕರು ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಇಮ್ತಿಯಾಜ್ ಮತ್ತು ಫಾತಿಮಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಫಾತಿಮಾ ಮನೆಯವರ ವಿರೋಧದ ನಡುವೆಯೂ ಇವರಿಬ್ಬರು ಮದುವೆಯಾಗಿದ್ದರು. ಆದರೆ ಶುಕ್ರವಾರ ಫಾತಿಮಾ ತಂದೆ, ನಿನ್ನನ್ನು ನಮ್ಮ ಅಳಿಯ ಎಂದು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ಮಾತುಕತೆ ನಡೆಸಲು ನಿಮ್ಮ ಮನೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಇಮ್ತಿಯಾಜ್ ಮನೆಗೆ ಬರುವಂತೆ ಹೇಳಿದ್ದಾರೆ.

ಮನೆಗೆ ಬಂದು ಕೆಲ ಹೊತ್ತು ಮಾತುಕತೆ ನಡೆಸಿದ್ದ ಕುಟುಂಬದ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಈ ವೇಳೆ ಫಾತಿಮಾ ಸಹೋದರರು ಚಾಕುವಿನಿಂದ ಇಮ್ತಿಯಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಯುತ್ತಿದ್ದಂತೆಯೇ ಇಮ್ತಿಯಾಜ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಇದರಿಂದ ಮತ್ತಷ್ಟು ಕೆರಳಿದ ಫಾತಿಮಾ ಸಹೋದರರು, ಇಮ್ತಿಯಾಜ್ ನನ್ನು ರಸ್ತೆಗೆ ಎಳೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಇಮ್ತಿಯಾಜ್ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳೀಯರು ಜಮಾಯಿಸಿದ್ದು, ಈ ಮಧ್ಯೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಎ.ಆರ್ ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹೈದರಾಬಾದ್ ಪೊಲೀಸರು ಮರ್ಯಾದಾ ಹತ್ಯೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *