Thursday, 12th December 2019

ಮದ್ವೆಯಾದ ಒಂದೇ ವಾರಕ್ಕೆ ಪತಿಯನ್ನು ಕೊಲ್ಲಲು ಯತ್ನಿಸಿದ ಪತ್ನಿ

ಹೈದರಾಬಾದ್: ಮದುವೆಯಾದ ಒಂದೇ ವಾರಕ್ಕೆ ಪತ್ನಿಯೊಬ್ಬಳು ಹಾಲಿನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ.

ನಾಗಮಣಿ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ ಪತ್ನಿ. ಒಂದು ವಾರದ ಹಿಂದೆ ಮದನಂತಪುರಂ ಗ್ರಾಮದ ನಾಗಮಣಿ ಜೋನ್ನಗಿರಿ ನಿವಾಸಿ ಲಿಂಗಯ್ಯ ಅವರ ಜೊತೆ ಮದುವೆ ಆಗಿದ್ದಳು. ಮದುವೆ ಆದ ಒಂದೇ ವಾರಕ್ಕೆ ವೈವಾಹಿಕ ಜೀವನದಿಂದ ಮುಕ್ತಿ ದೊರೆಯಲು ನಾಗಮಣಿ ತನ್ನ ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ.

ನಾಗಮಣಿಗೆ ಲಿಂಗಯ್ಯನ ಜೊತೆ ಮದುವೆ ಆಗಲು ಇಷ್ಟವಿರಲಿಲ್ಲ. ಆದರೂ ಆಕೆಯ ಪೋಷಕರು ಬಲವಂತವಾಗಿ ಈ ಮದುವೆ ಮಾಡಿಸಿದ್ದಾರೆ. ಹಾಗಾಗಿ ನಾಗಮಣಿ ಪತಿಯ ಮನೆಗೆ ಹೋದ ಒಂದು ವಾರದಲ್ಲೇ ಹಾಲಿನಲ್ಲಿ ವಿಷ ಹಾಕಿ ಲಿಂಗಯ್ಯನನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ.

ಹಾಲು ಕುಡಿಯುತ್ತಿದ್ದಂತೆ ಲಿಂಗಯ್ಯ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಕುಟುಂಬದ ಸದಸ್ಯರು ಆತನನ್ನು ಗುತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಲಿಂಗಯ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಗುತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜೋನ್ನಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

Leave a Reply

Your email address will not be published. Required fields are marked *