Friday, 22nd November 2019

Recent News

ಪ್ರಿಯಕರನ ಜೊತೆಗಿರಲು ಪತಿಯನ್ನೇ 50 ಅಡಿ ಎತ್ತರದಿಂದ ತಳ್ಳಿದ್ಳು!

ನವದೆಹಲಿ: ಪ್ರಿಯಕರನ ಜೊತೆ ವಾಸಿಸಲು ಪತ್ನಿಯೊಬ್ಬಳು ತನ್ನ ಪತಿಯನ್ನು 50 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯ ಪಟೇಲ್ ನಗರದಲ್ಲಿ ನಡೆದಿದೆ.

ದಯಾರಾಂ(42) ಕೊಲೆಯಾದ ಪತಿ. ಆರೋಪಿ ಅನಿತಾ ತನ್ನ ಪ್ರಿಯಕರ ಅರ್ಜುನ್ ಮಂಡಲ್ ನ ಜೊತೆ ವಾಸಿಸಲು ಪತಿ ದಯಾರಾಂನನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡದ 50 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ್ದಾಳೆ. ಪರಿಣಾಮ ದಯಾರಾಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಘಟನೆ ನಡೆದ ನಂತರ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದು, ಎರಡು ದಿನದಲ್ಲಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಪೊಲೀಸರು ದಯಾರಾಂ ಮೊಬೈಲ್, ರಕ್ತದ ಕಲೆಯಾಗಿದ್ದ ಚಪ್ಪಲಿ, ಉಡುಪು ಹಾಗೂ ಆರೋಪಿಗಳಾದ ಅನಿತಾ ಹಾಗೂ ಆಕೆಯ ಪ್ರಿಯಕರ ಅರ್ಜುನ್ ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಷಯ ತಿಳಿದಿದ್ದು ಹೇಗೆ:
ಗುರುವಾರ ಪಟೇಲ್ ನಗರದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಬಳಿ ದಯಾರಾಂ ಮೃತದೇಹ ಪತ್ತೆಯಾಗಿದೆ. ಈ ವಿಷಯ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದಯಾರಾಂ ಮೃತದೇಹದ ಬಳಿ ಟಿಫನ್ ಬಾಕ್ಸ್, ಮಫ್ಲರ್ ಹಾಗೂ ಮೊಬೈಲ್‍ನ ಬ್ಯಾಟರಿ ದೊರೆತಿದ್ದು, ಟೆರೇಸ್‍ನಲ್ಲಿ ಮದ್ಯದ ಬಾಟಲಿ, ಗ್ಲಾಸ್ ಹಾಗೂ ತಿಂಡಿ ತಿನ್ನುವ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದಯಾರಾಂ ಬ್ಯಾಗಿನಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ಮೂವರ ಫೋನ್ ನಂಬರ್ ಇತ್ತು. ಪೊಲೀಸರು ಆ ಪತ್ರವನ್ನು ತೆಗೆದುಕೊಂಡು ಚೇನು ಎಂಬವರಿಗೆ ಕರೆ ಮಾಡಿ ಕಟ್ಟಡದ ಬಳಿ ಕರೆಸಿಕೊಂಡಿದ್ದಾರೆ. ಬಳಿಕ ಮೃತ ವ್ಯಕ್ತಿಯನ್ನು ಗುರುತಿಸಲು ಹೇಳಿದ್ದಾರೆ. ಈ ವೇಳೆ ಚೇನು ಮೃತ ವ್ಯಕ್ತಿಯನ್ನು ದಯಾರಾಂ ಎಂದು ಗುರುತಿಸಿದ್ದಾನೆ. ಈ ಬಗ್ಗೆ ಪೊಲೀಸರು ಪತ್ನಿಯನ್ನು ವಿಚಾರಿಸಿದಾಗ ಆಕೆ ವಿವಿಧ ಹೇಳಿಕೆಯನ್ನು ನೀಡುತ್ತಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ಆಕೆಯ ಕಾಲ್ ರೆಕಾರ್ಡ್ ಪರಿಶೀಲಿಸಿದ್ದಾರೆ.

ಆರೋಪಿ ಸಿಕ್ಕಿದ್ದು ಹೇಗೆ:
ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಅನಿತಾ ಒಂದು ನಂಬರ್ ಗೆ ಹೆಚ್ಚು ಕರೆ ಮಾಡುತ್ತಿದ್ದಳು. ಇತ್ತ ದಯಾರಾಂ ಕೂಡ ಕೊನೆಯ ಬಾರಿ ಆ ನಂಬರ್ ಗೆ ಮಾಡಿ ಮಾತನಾಡಿದ್ದನು. ಇದರಿಂದ ಹೆಚ್ಚು ಅನುಮಾನಗೊಂಡ ಪೊಲೀಸರು ಅನಿತಾ ನಂಬರ್ ಹಾಗೂ ಆಕೆ ಮಾತನಾಡುತ್ತಿದ್ದ ವ್ಯಕ್ತಿಯ ನಂಬರ್ ಅನ್ನು 10 ನಿಮಿಷಗಳ ಕಾಲ ಟ್ರೇಸ್ ಮಾಡಿದ್ದಾರೆ. ಈ ವೇಳೆ ಇಬ್ಬರು ಒಂದೇ ಸ್ಥಳದಲ್ಲಿರುವುದು ತಿಳಿದು ಬಂದಿದೆ. ಈ ನಂಬರ್ ಬಗ್ಗೆ ಪೊಲೀಸರು ಅನಿತಾಳನ್ನು ಪ್ರಶ್ನಿಸಿದಾಗ ಆಕೆ ಇದು ನನ್ನ ಸಹೋದರನ ನಂಬರ್ ಎಂದು ಹೇಳಿದ್ದಾಳೆ.

ಬಳಿಕ ಆ ನಂಬರಿನ ಮಾಲೀಕ ಅರ್ಜುನ್ ಮಂಡಲ್‍ರನ್ನು ಪ್ರಶ್ನಿಸಿದಾಗ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಅನಿತಾ ಜೊತೆ ಅನೈತಿಕ ಸಂಬಂಧ ಇದೆ ಎಂದು ಹೇಳಿದ್ದಾನೆ. ಅಕ್ಟೋಬರ್ 16ರಂದು ಅನಿತಾ, ದಯಾರಾಂನನ್ನು ಕಟ್ಟಡದ ಬಳಿ ಕರೆದಿದ್ದಾಳೆ. ಬಳಿಕ ಅರ್ಜುನ್ ಜೊತೆ ಸೇರಿ ದಯಾರಾಂನನ್ನು ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ಬಳಿಕ ಇಬ್ಬರು ತಮ್ಮ ತಮ್ಮ ಮನೆಗೆ ಹೋಗಿದ್ದಾರೆ. ಪೊಲೀಸರು ಅನಿತಾಳನ್ನು ವಿಚಾರಣೆ ನಡೆಸಿದ ಬಳಿಕ ಆರೋಪಿ ಅರ್ಜುನ್‍ನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *