Monday, 26th August 2019

ಬಲವಂತವಾಗಿ ಗಂಡನಿಂದಲೇ ಹೆಂಡತಿಗೆ ವಿಷಪ್ರಾಶನ!

ಹಾವೇರಿ: ಪತಿಯೇ ಪತ್ನಿಗೆ ಬಲವಂತವಾಗಿ ವಿಷ ಕುಡಿಸಿದ ಘಟನೆ ತಾಲೂಕಿನ ಗುತ್ತಲ ಗ್ರಾಮದಲ್ಲಿ ನಡೆದಿದೆ.

ಪುಟ್ಟವ್ವ ಕೊರಪ್ಪನವರ್ (30) ಅಸ್ವಸ್ಥಗೊಂಡ ಮಹಿಳೆ. ಬಸಪ್ಪ ಕೊರೆಪ್ಪನವರ್ (36) ಪತ್ನಿಗೆ ವಿಷ ಕುಡಿಸಿದ ಪತಿ ಮಾಹಶಯ. ಇವರು ಮೂಲತಃ ಬಸಾಪುರ ಗ್ರಾಮದವರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಗಂಡ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಪುಟ್ಟವ್ವ ತನ್ನ ತವರು ಮನೆ ಗುತ್ತಲ ಗ್ರಾಮಕ್ಕೆ ಹೋಗಿದ್ದಾರೆ. ಬುಧವಾರ ಪತ್ನಿಯ ಮನೆಗೆ ಬಂದ ಬಸಪ್ಪ ಆಕೆಯೊಂದಿಗೆ ಪುನಃ ಜಗಳವಾಡಿದ್ದಾನೆ. ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿ ಏಕಾಏಕಿ ಬಲವಂತವಾಗಿ ಕ್ರಿಮಿನಾಶಕ ಕುಡಿಸಿ ಪರಾರಿಯಾಗಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡ ಮಹಿಳೆಯನ್ನು ಕುಟುಂಬದವರು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಪುಟ್ಟವ್ವ, ಗಂಡ ಕಿರುಕುಳ ನೀಡುತ್ತಿದ್ದು, ಬಲವಂತವಾಗಿ ಕ್ರಿಮಿನಾಶಕ ಕುಡಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *