Connect with us

Dharwad

ಕಮಲೇಶ್ ತಿವಾರಿ ಹತ್ಯೆ – ಹುಬ್ಬಳ್ಳಿ ಮೂಲದ ವ್ಯಕ್ತಿಯ ಬಂಧನ

Published

on

ಹುಬ್ಬಳ್ಳಿ: ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿಯ ಕೊಲೆ ಪ್ರಕರಣ ಸಂಬಂಧ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಳೆ ಹುಬ್ಬಳ್ಳಿಯ ಅರವಿಂದ ನಗರದ ಮೊಹಮ್ಮದ್ ಜಾಫರ್ ಸಾಧೀಕ್ ಎಂದು ಗುರುತಿಸಲಾಗಿದೆ. ರೈಲ್ವೆ ಇಲಾಖೆಯ ಕಾರ್ಯಾಗಾರದಲ್ಲಿ ನೌಕರನಾಗಿದ್ದ ಮೊಹಮ್ಮದ್ ನನ್ನು ತಿವಾರಿ ಹತ್ಯೆಯ ವಿಚಾರವಾಗಿ ಹಳೆ ಹುಬ್ಬಳ್ಳಿ ಪೊಲೀಸರು ಇಂದು ಬಂಧಿಸಿದ್ದಾರೆ.

ರೈಲ್ವೆ ಇಲಾಖೆಯ ಕಾರ್ಯಾಗಾರದಲ್ಲಿ ನೌಕರನಾಗಿದ್ದ ಮೊಹಮ್ಮದ್, ಕೆಲ ವರ್ಷಗಳಿಂದ ಸಿಮಿ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದನು ಎನ್ನಲಾಗಿದೆ. ಈತ ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣದಲ್ಲಿ ಆಂತರಿಕ ಭದ್ರತಾ ವಿಭಾಗ (ಐ.ಎಸ್.ಡಿ) ಪೊಲೀಸರಿಗೆ ಬೇಕಾಗಿದ್ದನು. ಆದ್ದರಿಂದ ಇಂದು ಹಳೆ ಹುಬ್ಬಳ್ಳಿ ಪೊಲೀಸರು ಬಂಧಿಸಿ ಬಳಿಕ ಆರೋಪಿಯನ್ನು ಆಂತರಿಕ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಐ.ಎಸ್.ಡಿ ಯ ವಿಚಾರಣೆ ಬಳಿಕ ರಾಷ್ಟ್ರೀಯ ಭದ್ರತಾ ತಂಡದ ವಶಕ್ಕೆ ಆರೋಪಿಯನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಮಲೇಶ್ ತಿವಾರಿ ಅವರು ಹಿಂದೂ ಸಮಾಜ ಪಾರ್ಟಿಯ ಮುಖ್ಯಸ್ಥರು ಹಾಗೂ ಹಿಂದೂ ಮಹಾಸಭಾ ಮಾಜಿ ನಾಯಕರಾಗಿದ್ದು, ಶುಕ್ರವಾರ ಲಕ್ನೋದಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎಸ್‍ಐಟಿ ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಕಮಲೇಶ್ ತಿವಾರಿ 2015ರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆಗೈದಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.