Wednesday, 11th December 2019

Recent News

ಕುಮಾರಸ್ವಾಮಿ ಪ್ರಜ್ಞೆ ಇಟ್ಕೊಂಡು ಮಾತನಾಡಲಿ – ಹೆಚ್‍ಡಿಕೆ ವಿರುದ್ಧ ಟಗರು ಗುಟುರು

ಹುಬ್ಬಳ್ಳಿ: ಕುಮಾರಸ್ವಾಮಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಚ್‍ಡಿಕೆ ವಿರುದ್ಧ ಗುಡುಗಿದ್ದಾರೆ.

ಇಂದು ನಗರದಲ್ಲಿ ಸಿದ್ದರಾಮಯ್ಯ ಸಾಕಿದ ಗಿಣಿಗಳೆ ಹದ್ದಾಗಿ ನಮ್ಮ ಸರ್ಕಾವನ್ನು ಕುಕ್ಕಿದವು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಪಾಪ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಆದರೆ ಮಾತನಾಡುವ ಮೊದಲು ಸ್ವಲ್ಪ ಪ್ರಜ್ಞೆ ಇಟ್ಟುಗೊಂಡು ಮಾತನಾಡಲಿ ಎಂದು ವಾಗ್ದಾಳಿ ಮಾಡಿದರು.

ಜಿಟಿ ದೇವೇಗೌಡರ ಹೇಳಿಕೆ ಮೂಲಕವೇ ಗೊತ್ತಾಗುತ್ತದೆ. ಬಿಜೆಪಿಗೆ ಮತ ನೀಡಲು ಹೇಳಿದ್ದು ಕುಮಾರಸ್ವಾಮಿ ಎಂದು. ಸತ್ಯ ಹೇಳಿದ ಮೇಲೆ ನಾಟಕ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಅತ್ಯಂತ ಕೆಟ್ಟದಾಗಿತ್ತು ಎಂದು ಸ್ವತಃ ತಾವೇ ಸತ್ಯ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರ ಸರ್ಕಾರಕ್ಕೆ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಾನೇನೂ ಹೇಳಿಲ್ಲ, ಎಲ್ಲವನ್ನೂ ಅವರೇ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಗೆ ನಾನು ಯಾಕೇ ಪ್ರತಿಕ್ರಿಯೆ ನೀಡಲಿ. ಕುಮಾರಸ್ವಾಮಿ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಉಪಚುನಾವಣೆಗೆ ನಾವು ಸಿದ್ಧವಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಪಕ್ಷಾಂತರಿಗಳನ್ನು ಜನ ಯಾವಾಗಲೂ ಕ್ಷಮಿಸುವುದಿಲ್ಲ. ಈ ಚುನಾವಣೆ ಮೂಲಕ ತಕ್ಕ ಪಾಠಕಲಿಸುತ್ತಾರೆ. ಉಪಚುನಾವಣೆಯನ್ನು ವಿಶ್ವಾಸದಿಂದ ನಡೆಸಿ, 15 ಕ್ಷೇತ್ರಗಲ್ಲಿ ಅಭ್ಯರ್ಥಿಗಳ ಗೆಲ್ಲಿಸುತ್ತೇವೆ. ಈ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದರು.

ನಮ್ಮದು ಇನ್ನೂ ಸಾಲ ಮನ್ನಾ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದ ರೈತರನ್ನು ಸಮಾಧಾನ ಮಾಡಿದ ಸಿದ್ದರಾಮಯ್ಯ, ನಾನು ಮಾಡಿದ್ದು ಸಾಲಮನ್ನಾ ಸರಿಯಾಗಿದೆ, ಕುಮಾರಸ್ವಾಮಿ ಮಾಡಿರೋದು ಸರಿಯಾಗಿಲ್ಲ ಎಂದು ಹೇಳಿದರು.

ಶನಿವಾರ ಹೊಸಕೋಟೆಯಲ್ಲಿ ಮಾತನಾಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಸಾಕಿದ ಗಿಣಿಗಳೇ ಸಿದ್ದರಾಮಯ್ಯ ಅವರನ್ನು ಹದ್ದಾಗಿ ಕುಕ್ಕಿದರು ಎಂದು ಹೇಳಿದ್ದರು. ಇದಕ್ಕೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ಈಗ ಕಾಂಗ್ರೆಸ್ ನಾಯಕರು ನಾಟಕವಾಡುತ್ತಿದ್ದಾರೆ. ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ನಮ್ಮ ಸರ್ಕಾರವನ್ನು ಕುಕ್ಕಿದವು ಎಂದು ಹೇಳಿದ್ದರು. ಈ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *