Wednesday, 21st August 2019

Recent News

ದೇಶದಲ್ಲಿ ಎಷ್ಟು ಸುಭದ್ರ ಕಟ್ಟಡ ಇರುತ್ತದೆಯೋ, ಅಷ್ಟೇ ಸುಭದ್ರ ಕಾನೂನು ಇರುತ್ತದೆ: ನ್ಯಾ. ದೀಪಕ್ ಮಿಶ್ರಾ

ಹುಬ್ಬಳ್ಳಿ: ದೇಶದಲ್ಲಿ ಎಷ್ಟು ಸುಭದ್ರವಾದ ಕಟ್ಟಡ ಇರುತ್ತವೆಯೋ, ಅಷ್ಟೇ ಸುಭದ್ರವಾದ ಕಾನೂನು ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾರವರು ಹೇಳಿಕೆ ನೀಡಿದ್ದಾರೆ.

ಏಷ್ಯಾದಲ್ಲಿಯೇ ವಿಶೇಷವಾದ ಕೋರ್ಟ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಇದು ಕೇವಲ ಸಮಾರಂಭ ಅಲ್ಲ, ಇದು ಒಂದು ಕುಟುಂಬದ ಸಮಾರಂಭ. ನ್ಯಾಯದ ಮುಂದೆ ಎಲ್ಲರು ಸಮಾನರು, ಇಲ್ಲಿ ಬಡವ-ಶ್ರೀಮಂತ, ಮೇಲು-ಕೀಳೆಂಬ ಭಾವನೆ ಇಲ್ಲ. ಇದು ಎಲ್ಲರಿಗೂ ಒಂದೇ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ಸುಭದ್ರ ಕಟ್ಟಡ ಎಂಬುದು ಕಟ್ಟಡ ಅಲ್ಲ. ಅದು ಸುಭದ್ರ ಕಾನೂನಿನ ಸಂಕೇತ. ಹೀಗಾಗಿ ದೇಶದಲ್ಲಿ ಎಷ್ಟು ಸುಭದ್ರ ಕಟ್ಟಡ ಇರುತ್ತದೆಯೋ, ಅಷ್ಟೇ ಸುಭದ್ರ ಕಾನೂನು ಇರುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಉತ್ತಮ ಕಾಳಜಿಯನ್ನು ಹೊಂದಿದ್ದಾರೆ. ರಾಜ್ಯದ ಎಲ್ಲಾ ನ್ಯಾಯಾಲಯಗಳು ಸ್ವಂತ ಕಟ್ಟಡಗಳು ಹೊಂದಲಿ ಎನ್ನುವ ಅವರ ಕಾಳಜಿಯು ನನಗೆ ತುಂಬಾ ಸಂತೋಷ ತಂದಿದೆ. ದೇಶದಲ್ಲಿ ಎಲ್ಲಾ ನ್ಯಾಯಾಲಯಗಳು ಉತ್ತಮ ಕಟ್ಟಡವನ್ನು ಹೊಂದಬೇಕು. ಇದರ ಜೊತೆಗೆ ಉತ್ತಮ ನ್ಯಾಯ ಕೊಡುವ ಕೆಲಸಗಳು ಆಗಬೇಕು ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಇದು ಗಂಡು ಮೆಟ್ಟಿದ ನಾಡು, ನನಗೆ ಅಧಿಕಾರಿಗಳು ಇಂಗ್ಲೀಷಿನಲ್ಲಿ ಭಾಷಣ ಬರೆದುಕೊಟ್ಟಿದ್ದರು, ಆದರೆ ಮುಖ್ಯನ್ಯಾಯಾಧೀಶರುಗಳೇ ಕನ್ನಡದಲ್ಲಿ ಮಾತನಾಡಿದ ಮೇಲೆ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಈ ಕಟ್ಟಡಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ಈ ಹಿಂದೆ ಕಲಬುರಗಿ ಹಾಗೂ ಧಾರವಾಡದಲ್ಲಿ ಹೈಕೋರ್ಟ್ ಆಗಲು ನಾನು ಶ್ರಮಪಟ್ಟಿದ್ದೆ. ನನ್ನ ಈ ಹಿಂದಿನ ಇಪ್ಪತ್ತು ತಿಂಗಳ ಅವಧಿಯಲ್ಲಿ ನ್ಯಾಯಾಲಯಗಳಿಗೆ ಅತೀ ಹೆಚ್ಚು ಮೂಲಭೂತ ಸೌಕರ್ಯ ಕೊಟ್ಟಿದ್ದೆ ಎಂದು ಹೇಳಿದರು.

ರಾಜ್ಯದಲ್ಲಿ ಕೇವಲ 20 ನ್ಯಾಯಾಲಯದ ಕಟ್ಟಡಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಮತ್ತು ನ್ಯಾಯಾಂಗ ಇಲಾಖೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಲು ನಾನು ಸಿದ್ದನಿದ್ದೇನೆ. ಫ್ಲೆಕ್ಸ್ ತೆರವು ಮಾಡಲು ನ್ಯಾಯಮೂರ್ತಿಗಳ ಆದೇಶ ನನಗೆ ಹೆಚ್ಚು ಸಂತೋಷ ಕೊಟ್ಟಿದೆ. ನಾವು ಹೇಳಿದರೆ ಅಧಿಕಾರಿಗಳು ಕೇಳುವುದಿಲ್ಲ, ಆದರೆ ಕೋರ್ಟ್ ಆದೇಶ ನೀಡಿದಾಗ ಅಧಿಕಾರಿಗಳು ಎದ್ದು-ಬಿದ್ದು ಕೆಲಸ ಮಾಡುತ್ತಾರೆ ಎಂದರು.

ನಮ್ಮ ಸರ್ಕಾರ ಅಖಂಡ ಕರ್ನಾಟಕದ ಸರ್ಕಾರವಾಗಿದೆ. ಯಾವುದೇ ಮಾತಿಗೂ ಕಿವಿ ಕೊಡಬೇಡಿ. ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿದಾಗ ನಮ್ಮ ಸರ್ಕಾರದ ನಿಲುವನ್ನು ನಿಮ್ಮ ಮುಂದಿಡುತ್ತೇನೆ ಎಂದು ಅವರು ತಿಳಿಸಿದರು.

ಹುಬ್ಬಳ್ಳಿ ನ್ಯಾಯಾಲಯದ ವಿಶೇಷವೇನು?
122 ಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಕಟ್ಟಡವು ಸುಮಾರು 5 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ. ನ್ಯಾಯಾಲಯದ ಕಟ್ಟಡವು ಒಟ್ಟು 7 ಮಹಡಿಗಳನ್ನು ಹೊಂದಿದ್ದು, ಎಲ್ಲಾ ಕಟ್ಟಡವು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಒಟ್ಟು ಏಳು ಅಂತಸ್ತಿನ ಕಟ್ಟದಲ್ಲಿ ಮೊದಲೆರಡು ಅಂತಸ್ತುಗಳನ್ನು ನ್ಯಾಯಧೀಶರು ಹಾಗೂ ವಕೀಲರಿಗೆ ಪಾರ್ಕಿಂಗ್ ಗೆ ಮೀಸಲಿಡಲಾಗಿದೆ. ಮೊದಲ ಮಹಡಿಯಲ್ಲಿ ಹಾಲ್ ನಲ್ಲಿ ವಾದಿ – ಪ್ರತಿವಾದಿ ಹಾಗೂ ಸರಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಮೊದಲನೇ ಮಹಡಿಯಲ್ಲಿ 3 ಕೋರ್ಟ್, ಒಂದು ಕಾನ್ಫರೆನ್ಸ್ ಹಾಲ್, ಇನ್ನುಳಿದ 4 ಮಹಡಿಗಳಲ್ಲಿ ತಲಾ 4 ನ್ಯಾಯಾಲಯಗಳಿದ್ದು, 1 ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ, 4 ಸಿವಿಲ್ ಜ್ಯೂನಿಯರ್ ಡಿವಿಜನ್, 2 ಜೆಎಂಎಫ್‍ಸಿ, 3 ಸಿನಿಯರ್ ಡಿವಿಜನ್ ಕೋರ್ಟ್‍ಗಳಿವೆ. ಅಲ್ಲದೇ ದೊಡ್ಡದಾಗ ಕಾನ್ಫರೆನ್ಸ್ ಹಾಲ್, 2 ಕೋರ್ಟ್‍ಗಳಲ್ಲಿ ಬಾರ್ ಅಸೋಸಿಯೇಶನ್, ಲೈಬ್ರರಿ, ಮಹಿಳಾ ವಕೀಲರ ಕೊಠಡಿಗಳು ಇವೆ.

ನ್ಯಾಯಾಧೀಶರ ಧ್ವನಿ ಕೇಳಿಸಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ. ಸಂಪೂರ್ಣ ನ್ಯಾಯಾಲಯದ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ. ಕೈದಿಗಳಿಗೆ ಲಾಕಪ್ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಂಪೂರ್ಣ ನ್ಯಾಯಾಲಯದಲ್ಲಿ ಒಟ್ಟು ಒಂದು ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಲಯದಲ್ಲಿ ಅತ್ಯಾಧುನಿಕ ಕ್ಯಾಂಟೀನ್ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಮಹಿಳೆಯರ ಅನುಕೂಲಕ್ಕಾಗಿ ಮಗುವಿಗೆ ಹಾಲುಣಿಸುವ ಕೊಠಡಿಯನ್ನು ಸಹ ನಿರ್ಮಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮಗಳು:
ಕಟ್ಟಡವು ಭೂಕಂಪ ನಿರೋಧಕ ಶಕ್ತಿಯನ್ನು ಹೊಂದಿದ್ದು, ಭೂಮಿ ಕಂಪನದ ಮುನ್ಸೂಚನೆಯನ್ನು ತಿಳಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಲ್ಲದೇ ಸಂಕೀರ್ಣದ ಯಾವುದೇ ಭಾಗದಲ್ಲಿ ಹೊಗೆ ಕಾಣಿಸಿಕೊಂಡರೆ, ತಕ್ಷಣವೇ ಮುನ್ಸೂಚನೆನೀಡುವ ವ್ಯವಸ್ಥೆ ಸಿದ್ದಪಡಿಸಲಾಗಿದೆ. ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಫೈರ್‍ವಾಟರ್‍ಗಳು ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುವಂತೆ ಸಿದ್ಧಪಡಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಏಷ್ಯಾದಲ್ಲಿಯೇ ವಿಶೇಷವಾದ ಕೋರ್ಟ್ ಎಂದು ಹುಬ್ಬಳ್ಳಿಯ ನ್ಯಾಯಾಲಯ ಸಂಕೀರ್ಣ ಗುರುತಿಸಿಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply

Your email address will not be published. Required fields are marked *