Connect with us

International

ಬೈಡನ್ ಅಧ್ಯಕ್ಷ, ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ – ಭಾರತದ ಮೇಲೆ ಆಗೋ ಪರಿಣಾಮ ಏನು?

Published

on

ವಾಷಿಂಗ್ಟನ್: ಭಾರೀ ಹೈಡ್ರಾಮಾ, ಸಾಕಷ್ಟು ರೋಚಕ ತಿರುವುಗಳ ನಡುವೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನೂ ಮೂರು ರಾಜ್ಯಗಳ ಮತ ಎಣಿಕೆ ಬಾಕಿ ಇರುವಂತೆಯೇ ಹಾಲಿ ಅಧ್ಯಕ್ಷ, ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ 77 ವರ್ಷದ ಜೋ ಬೈಡನ್ ಗೆದ್ದು ಬೀಗಿದ್ದಾರೆ.

ಎಲ್ಲರನ್ನು ಒಳಗೊಂಡ ಅಮೆರಿಕ ನಮ್ಮ ಆದ್ಯತೆ ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳುವೆ. ಧನ್ಯವಾದ ಅಮೆರಿಕ ಎಂದಿದ್ದಾರೆ. ಆದರೆ ಇದನ್ನು ಒಪ್ಪಲು ಹಠಮಾರಿ ಡೊನಾಲ್ಡ್ ಟ್ರಂಪ್ ಸಿದ್ಧರಿಲ್ಲ. ನನಗೆ ಸಾಕಷ್ಟು ವೋಟ್ ಬಂದಿವೆ ನಾನೇ ವಿನ್ನರ್ ಎಂದಿದ್ದಾರೆ. ಅಲ್ಲದೇ ಫಲಿತಾಂಶದ ವಿರುದ್ಧ ನಾಳೆ ಸುಪ್ರೀಂಕೋರ್ಟ್ ಮೆಟ್ಟಿಲು ಏರುವುದಾಗಿ ಘೋಷಿಸಿದ್ದಾರೆ.

ಅಂತಿಮ ಫಲಿತಾಂಶ ಹೊರಬೀಳುತ್ತಲೇ ಅಮೆರಿಕದಲ್ಲಿ ಬೈಡನ್ ಬೆಂಬಲಿಗರು ರಸ್ತೆಗಿಳಿದು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅಬ್ಬಾ ನಾಲ್ಕು ವರ್ಷಗಳ ದುರಾಡಳಿತಕ್ಕೆ ತೆರೆಬಿತ್ತು ಅಂತಾ ಕುಣಿದು ಕುಪ್ಪಳಿಸಿದ್ದಾರೆ. ಅತ್ತ ಟ್ರಂಪ್ ಬೆಂಬಲಿಗರು ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.

ಜೋ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತ ಮೂಲದ ಕಮಲಾ ಹ್ಯಾರೀಸ್ ಅಮೆರಿಕ ರಾಜಕೀಯದ ಸಂಪ್ರದಾಯದಂತೆ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಇದಕ್ಕೆ ಮುನ್ನವೇ, ಕೋವಿಡ್ ನಿಯಂತ್ರಣಕ್ಕಾಗಿ ಹೊಸ ಟಾಸ್ಕ್ ಫೋರ್ಸ್ ರಚಿಸುವುದಾಗಿ ಬೈಡನ್ ಘೋಷಿಸಿದ್ದು, ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿಗೆ ಟಾಸ್ಕ್ ಫೋರ್ಸ್ ನೇತೃತ್ವವನ್ನು ವಹಿಸುವ ಸಾಧ್ಯತೆಗಳು ದಟ್ಟವಾಗಿವೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಬೈಡನ್ ಪ್ರಕಟಿಸುವ ಸಂಭವ ಇದೆ.

ಭಾರತದ ಮೇಲೆ ಏನು ಪರಿಣಾಮ?
ಭಾರತ ಪ್ರಧಾನಿ ಮೋದಿಯವರ ಅತ್ಯಾಪ್ತರಾಗಿದ್ದ ಡೊನಾಲ್ಡ್ ಟ್ರಂಪ್ ಸೋತಿದ್ದಾರೆ. ಜೋ ಬೈಡನ್ ಗೆದ್ದಿದ್ದಾರೆ. ಹೀಗಾಗಿ ಭಾರತದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಈಗ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಟ್ರಂಪ್ ಅವಧಿಯಲ್ಲಿ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಸಿದ್ದವು. ಈಗ ಬೈಡನ್ ಭಾರತದ ಜೊತೆ ಹೇಗೆ ವ್ಯವಹರಿಸುತ್ತಾರೆ ಅನ್ನೋ ಬಗ್ಗೆ ಕುತೂಹಲ ಇದೆ. ಹಾಗೇ ನೋಡಿದ್ರೆ, ವಿದೇಶಾಂಗ ನೀತಿಯಲ್ಲಿ ಪರಿಣಿತರಾದ ಜೋ ಬೈಡನ್‍ಗೆ ಭಾರತ ಹೊಸದೇನು ಅಲ್ಲ. ಈ ಹಿಂದೆ ಅಂದ್ರೆ 2016ರಲ್ಲಿ ಪ್ರಧಾನಿ ಮೋದಿ, ಅಮೆರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ಜೋ ಬೈಡನ್ ಉಪಾಧ್ಯಕ್ಷರಾಗಿದ್ದರು. ಇಬ್ಬರಿಗೂ ಆಗಿನಿಂದಲೂ ಪರಿಚಯ ಇದೆ.

 

ಭಾರತದ ಮೇಲೆ ಪರಿಣಾಮ ಏನು?
ಭಾರತ, ಅಮೆರಿಕ ಸ್ನೇಹ ಸಂಬಂಧ ಸದೃಢವಾಗಿದ್ದು ಇದನ್ನು ದುರ್ಬಲಗೊಳಿಸುವುದು ಅಷ್ಟು ಸುಲಭ ಅಲ್ಲ. ತುಂಬಾ ವಿಚಾರಗಳಲ್ಲಿ ಅಮೆರಿಕಗೆ ಭಾರತದ ನೆರವು ಬೇಕೇಬೇಕು. ಬೈಡನ್ ಸರ್ಕಾರ ಭಾರತದ ಜೊತೆಗಿನ ಸಂಬಂಧವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ.

ಭಾರತ ಜೊತೆಗಿನ ಬಾಂಧವ್ಯದಲ್ಲಿ ಕಮಲಾ ಹ್ಯಾರಿಸ್ ಪಾತ್ರ ತುಂಬಾನೆ ಪ್ರಮುಖವಾದುದು. ಭವಿಷ್ಯದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಆಗುವ ಹಿನ್ನೆಲೆಯಲ್ಲಿ ಅವರ ಪ್ರಭಾವ ಅಧಿಕ. ಹೀಗಾಗಿಯೇ, ವಲಸೆದಾರರ ವಿಚಾರದಲ್ಲಿ ಬೈಡನ್ ಉದಾರವಾಗಿ ನಡೆದುಕೊಳ್ಳುವ ಸಾಧ್ಯತೆಯಿದ್ದು ಹೆಚ್1ಬಿ ವೀಸಾ ನಿರ್ಬಂಧ ಸಡಿಲವಾಗುವ ಮಾತು ಕೇಳಿ ಬಂದಿದೆ. ಇದು ನಿಜವೇ ಆದಲ್ಲಿ, ಭಾರತದ ಐದು ಲಕ್ಷ ಮಂದಿಗೆ ಅಮೆರಿಕಾದ ಪೌರತ್ವ ಸಿಗಲಿದೆ.
ಹಾಗೆಯೇ, ಕೌಟುಂಬಿಕ ವೀಸಾ ಬ್ಯಾಕ್‍ಲಾಗ್ ಕಡಿಮೆ ಮಾಡುವ ಸಂಭವವೂ ಇದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಬೆಂಬಲ ನೀಡಬಬಹುದು. ಚೀನಾವನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ ಎಂಬುದು ಕುತೂಹಲಕಾರಿ. ಚೀನಾ ಜೊತೆಗೆ ಟ್ರಂಪ್‍ನಷ್ಟು ಕಠಿಣವಾಗಿ ಬೈಡನ್ ವರ್ತಿಸದೇ ಇರಬಹುದು. ಆದರೆ ಚೀನಾಗೆ ಪೈಪೋಟಿಯಂತೂ ನೀಡುತ್ತಾರೆ. ಇದಕ್ಕೆ ಭಾರತದ ನೆರವು ಅತ್ಯಗತ್ಯ.

Click to comment

Leave a Reply

Your email address will not be published. Required fields are marked *

www.publictv.in