Saturday, 17th August 2019

2018ರ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಹುಟ್ಟದೇ ಇದ್ದರೆ ಅಷ್ಟೇ ಸಾಕು: ಅಣ್ಣಾ ಹಜಾರೆ

ನವದೆಹಲಿ: ಮುಂದಿನ ವರ್ಷ ಮಾರ್ಚ್ 23 ರಿಂದ ಆರಂಭಿಸಲು ಉದ್ದೇಶಿಸಲಾಗಿರುವ ಭ್ರಷ್ಟಚಾರ ವಿರೋಧಿ ಹಾಗೂ ಜನ ಲೋಕಪಾಲ್ ಮಸೂದೆ ಜಾರಿ ಸಂಬಂಧ ನಡೆಸಲಿರುವ ಹೋರಾಟದ ಚಳುವಳಿಯಲ್ಲಿ ಮತ್ತೊಬ್ಬ ಅರವಿಂದ ಕೇಜ್ರಿವಾಲ್ ಹುಟ್ಟಿ ಬಾರದೇ ಇದ್ದರೆ ಅಷ್ಟೇ ಸಾಕು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಅಣ್ಣಾ ಹಜಾರೆ ಅವರು ಬರುವ ಮಾರ್ಚ್ 23ಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದ ಚಳುವಳಿ ಆಯೋಜಿಸಲಿದ್ದು, ಈ ಚಳುವಳಿಯಲ್ಲಿ ದೇಶದ ನಾನಾ ಭಾಗಗಳ ರೈತರು ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಆಗ್ರಾದ ಶಾಹಿರ್ ಸ್ಮಾರಕ್ (ಸ್ವಾತಂತ್ರ್ಯ ಹುತಾತ್ಮರ ಸ್ಮಾರಕ ) ಸಭೆಯಲ್ಲಿ ಮಾತನಾಡಿದ ಅವರು ಜನ ಲೋಕಪಾಲ್ ಮಸೂದೆಯ ಜಾರಿಗೆ ಮೋದಿ ಸರ್ಕಾರ ವಿಳಂಬ ಮಾಡುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಪ್ಪಿತಸ್ಥರು ಎಂದು ಆರೋಪಿಸಿದರು. ಅಲ್ಲದೇ ನಾವು ಬಂಡವಾಳಶಾಹಿಗಳ ಸರ್ಕಾರವನ್ನು ಬಯಸುವುದಿಲ್ಲ. ಮೋದಿ ಅಥವಾ ರಾಹುಲ್ ಗಾಂಧಿ ಯಾರೇ ಆಗಿರಲಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಸರ್ಕಾರವನ್ನು ನಾವು ಬಯಸುತ್ತೇವೆ ಎಂದರು.

ಕೇಜ್ರಿವಾಲ್ ಜೊತೆಗೆ ಸದ್ಯ ನನಗೆ ಯಾವುದೇ ಸಂಬಂಧವಿಲ್ಲ, ಮುಂದಿನ ಹೋರಾಟದಲ್ಲಿ ಮತ್ತೆ ಅವರು ನನ್ನ ಚಳುವಳಿಯಲ್ಲಿ ಭಾಗವಹಿಸಿವುದಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

2011 ರಲ್ಲಿ ಅಣ್ಣಾ ಹಜಾರೆ ಯುಪಿಎ ಸರ್ಕಾರದ ವಿರುದ್ಧ ಜನ ಲೋಕಪಾಲ್ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್, ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಂತರ 2012 ರಲ್ಲಿ ತಮ್ಮ ಸ್ವಂತ ಆಮ್ ಆದ್ಮಿ ಪಕ್ಷ ಸ್ಥಾಪಿಸಿ ರಾಜಕೀಯ ರಂಗ ಪ್ರವೇಶ ಮಾಡಿದರು. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ದಿನಗಳಲ್ಲಿ ಹಜಾರೆ ಅವರು ತಮ್ಮ ಭ್ರಷ್ಟಾಚಾರ ಚಳುವಳಿಯಿಂದ ಸ್ವಲ್ಪ ಹಿಂದೆ ಸರಿದಿದ್ದರು.

ಪ್ರಸ್ತುತ ಮತ್ತೆ ಜನ್ ಲೋಕಪಾಲ್ ನೇಮಕ, ಭ್ರಷ್ಟಚಾರ ವಿರೋಧಿ ಚಳುವಳಿ, ಚುನಾವಣೆ ಸುಧಾರಣೆಗಳು ಹಾಗೂ ದೇಶದಲ್ಲಿನ ರೈತರ ಸಮಸ್ಯೆಗಳ ಕುರಿತು ಹೋರಾಟಕ್ಕಿಳಿದಿರುವ ಅಣ್ಣಾ ಹಜಾರೆ ತನ್ನ ಹೋರಾಟವನ್ನು ಬೆಂಬಲಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡಿದ್ದ ನೋಟು ನಿಷೇಧ ಕ್ರಮವು ವಿಫಲವಾಗಿದ್ದು, ದೇಶದಲ್ಲಿ ಭ್ರಷ್ಟಾಚಾರ ಮುಂದುವರೆದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸ್ತುತ ರಾಜಕೀಯ ಸನ್ನಿವೇಶಗಳು ಯುವ ಜನರಿಗೆ ರಾಜಕೀಯ ಭವಿಷ್ಯದ ಭರವಸೆಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ಪ್ರಜಾಪ್ರಭುತ್ವದ ವ್ಯವಸ್ಥೆಯ ವಿರೋಧಿ ಅಲ್ಲ, ಆದರೆ ಚುನಾವಣೆಗಳು ಸಂವಿಧಾನದ ನೈಜ ಉದ್ದೇಶಗಳ ಅಡಿಯಲ್ಲಿ ನಡೆಸಬೇಕು. ನಾಯಕರು ಸಾಮಾನ್ಯ ವರ್ಗದ ಜನರಿಂದ ಬರಬೇಕು. ನಾವು ಬ್ರಿಟಿಷರನ್ನು ತೊರೆದು ಸ್ವಾತಂತ್ರ್ಯ ಪಡೆದಿದ್ದೇವೆ ಆದರೆ ಜನರು ಇನ್ನೂ ಪ್ರಜಾಪ್ರಭುತ್ವದ ನಿಜವಾದ ಅರ್ಥಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *