Connect with us

Bengaluru City

ಸೋನಿಯಾಗೆ ಎಂಬಿಪಿ ನಕಲಿ ಪತ್ರ: ಮತ್ತೋರ್ವ ಪತ್ರಕರ್ತ ಅರೆಸ್ಟ್

Published

on

ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲಿ ಮಾಡಿದ ಪ್ರಕರಣ ಸಂಬಂಧ ಪತ್ರಕರ್ತರೊಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಹಿರಿಯ ಪತ್ರಕರ್ತ ಹೇಮಂತ್ ಕುಮಾರ್ ಬಂಧಿತ ಆರೋಪಿ. ಈ ಪ್ರಕರಣದ ಸಂಬಂಧ ಈಗಾಗಲೇ ಪೋಸ್ಟ್ ಕಾರ್ಡ್ ಪತ್ರಿಕೆ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಯ ಬಂಧನವಾಗಿತ್ತು. ವಿಚಾರಣೆ ವೇಳೆ ಹೇಮಂತ್ ಕುಮಾರ್ ಸಲಹೆಯಂತೆ ನಕಲಿ ಲೆಡರ್ ಹೆಡ್ ರಚಿಸಲಾಯಿತು ಎಂದು ಮಹೇಶ್ ಹೆಗ್ಡೆ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹೇಮಂತ್ ಕುಮಾರ್ ಬಂಧನವಾಗಿದೆ.

ಹೇಮಂತ್ ಕುಮಾರ್ ಬಂಧನವನ್ನು ಬಿಜೆಪಿ ಖಂಡಿಸಿದ್ದು, ಶಾಸಕ ಸುರೇಶ್ ಕುಮಾರ್, ಬಿಜೆಪಿ ಮುಖಂಡ ಅಶ್ವಥ್ ನಾರಾಯಣ ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.

ಶಾಸಕ ಸುರೇಶ್ ಕುಮಾರ್ ಅವರು, ಒಡೆಯುವ-ಹೊಡೆಯುವ ಮಾತುಗಳನ್ನೇ ಆಡುವ ಬೇಳೂರು ಗೋಪಾಲಕೃಷ್ಣ,  ಪ್ರೊ. ಭಗವಾನ್ ರಂತಹವರನ್ನು ಬಿಟ್ಟು ನನ್ನ ಪತ್ರಕರ್ತ ಗೆಳೆಯ ಹೇಮಂತ್ ಕುಮಾರ್ ಅವರನ್ನು ಬಂಧಿಸಿರುವ ಗೃಹಸಚಿವರ Conditional ಕಾರ್ಯವೈಖರಿಯನ್ನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಏನಿದು ಪ್ರಕರಣ?:
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ರೀತಿಯಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಈ ಪ್ರಕರಣದ ಹಿನ್ನೆಲೆಯಲ್ಲಿ ಪೋಸ್ಟ್ ಕಾರ್ಡ್ ಪತ್ರಿಕೆ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಬಂಧನವಾಗಿತ್ತು. ಬಿಜೆಪಿ ಶಾಸಕ ಸಿ.ಟಿ.ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಬಂಧನವನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.