Thursday, 14th November 2019

Recent News

ದೇವರ ಪ್ರಸಾದವೆಂದು ಒಡೆದಿದ್ದಕ್ಕೆ ಕೈ ಹೋಯ್ತು- ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

– ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆತಂಕದ ವಾತಾವರಣ
– ಎಂಟು ಬಾಕ್ಸ್‌ಗಳಲ್ಲಿ 12 ಸಕ್ರಿಯ ಬಾಂಬ್

ಹುಬ್ಬಳ್ಳಿ: ದೇವರ ಪ್ರಸಾದವೆಂದು ತಿಳಿದು ಬಾಕ್ಸ್ ನಲ್ಲಿದ್ದ ವಸ್ತವನ್ನು ಒಡೆದಿದ್ದಕ್ಕೆ ಕೈ ಹೋಯಿತು ಎಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಗಾಯಳು ಹುಸೇನ್‍ಸಾಬ್ ಹೇಳಿದ್ದಾರೆ.

ವಿಜಯವಾಡ-ಅಮರಾವತಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ನಿಂತಿತ್ತು. ಈ ವೇಳೆ ಅನುಮಾನಾಸ್ಪದ ಬಾಕ್ಸ್‌ವೊಂದನ್ನು ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ವಶಕ್ಕೆ ಪಡೆದು, ರೈಲ್ವೇ ಮ್ಯಾನೇಜರ್ ಕಚೇರಿಗೆ ಒಪ್ಪಿಸಿದ್ದರು. ರಟ್ಟಿನ ಬಾಕ್ಸ್‍ನೊಳಗೆ ಬಕೀಟ್‍ನಲ್ಲಿ ಚಿಕ್ಕಚಿಕ್ಕದಾದ 8 ಬಾಕ್ಸ್‌ನಲ್ಲಿದ್ದ ನಿಂಬೆಹಣ್ಣಿನ ಗಾತ್ರದ ಬಾಂಬ್‍ಗಳ ಪೈಕಿ ಒಂದನ್ನು ಓಪನ್ ಮಾಡಲು ಪೇದೆ ಹಾಗೂ ರೈಲ್ವೆ ಮಾನೇಜರ್ ಮುಂದಾಗಿದ್ದರು.

ಈ ವೇಳೆ ಪೇದೆ ರವಿಕುಮಾರ್ ತಮಗೆ ಪರಿಚಯವಿದ್ದ ಹುಸೇನ್‍ಸಾಬ್ (22) ಅವರನ್ನು ಕರೆದು ಬಾಕ್ಸ್ ಓಪನ್ ಮಾಡುವಂತೆ ಸೂಚನೆ ನೀಡಿದ್ದರು. ಬಾಕ್ಸ್ ತೆಗೆದ ಹುಸೇನ್‍ಸಾಬ್ ನಿಂಬೆಹಣ್ಣು ಗಾತ್ರದ ವಸ್ತುವನ್ನು ಕಲ್ಲಿನಿಂದ ಒಡೆಯುತ್ತಿದ್ದಂತೆ ಬ್ಲಾಸ್ಟ್ ಆಗಿದೆ. ಪರಿಣಾಮ ಹುಸೇನ್‍ಸಾಬ್ ಕೈ ಕಟ್ ಆಗಿದೆ. ರಕ್ತಸ್ರಾವದಿಂದ ಬಿದ್ದು ಕಣ್ಣೀರು ಹಾಕುತ್ತಿದ್ದ ಹುಸೇನ್‍ಸಾಬ್ ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಕ್ಸ್‍ನಲ್ಲಿ ಇದ್ದ 12 ಬಾಂಬ್‍ಗಳು ಸಕ್ರಿಯವಾಗಿದ್ದು, ಸ್ಥಳಕ್ಕೆ ಬರುವಂತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೆ ತಿಳಿಸಲಾಗಿತ್ತು. ರೈಲು ನಿಲ್ದಾಣದ ಗಾರ್ಡನ್ ನಲ್ಲಿ ಮರಳಿನ ಮೂಟೆಗಳ ಮಧ್ಯೆ ಬಾಂಬ್‍ಗಳನ್ನು ಇರಿಸಲಾಗಿದೆ.

ಬಕೀಟ್ ಮೇಲೆ ನೋ ಬಿಜೆಪಿ, ನೋ ಆರ್‌ಎಸ್‍ಎಸ್ ಒನ್ಲೀ ಶಿವಸೇನಾ ಎಂದು ಬರೆಯಲಾಗಿದೆ. ಜೊತೆ ಕೊಲ್ಲಾಪುರ ಶಾಸಕರ ಹೆಸರನ್ನು ನಮೂದಿಸಲಾಗಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಸೋಮವಾರ ಎನ್‍ಐಎ ಅಧಿಕಾರಿಗಳು ಹುಬ್ಬಳ್ಳಿಗೆ ಆಗಮಿಸಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಗಾಯಾಳು ಹುಸೇನ್‍ಸಾಬ್, ಗದಗನಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದಿದ್ದೆ. ಈ ವೇಳೆ ಆರ್‌ಪಿಎಫ್‌ ಪೇದೆ ರವಿಕುಮಾರ್ ಅವರು ಕರೆದು, ಇದನ್ನು ತಗೊಂಡು ಆಫೀಸ್ ಹೊರಗೆ ಹೋಗಿ ಏನು ಅಂತ ನೋಡು ಅಂದ್ರು. ದೇವರ ಪ್ರಸಾದ ಗಟ್ಟಿಯಾಗಿದೆ ಅಂತ ತಿಳಿದು ಕಲ್ಲಿನಿಂದ ಒಂದು ಪೆಟ್ಟು ಹಾಕಿದ್ದೆ ತಡ ಬ್ಲಾಸ್ಟ್ ಆಯಿತು. ಪರಿಣಾಮ ನನ್ನ ಕೈಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದ ಅನುಮಾನಾಸ್ಪದ ಬಾಕ್ಸ್ ಪತ್ತೆ ವಿಚಾರವಾಗಿ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ಬಾಕ್ಸ್ ಪತ್ತೆ ಹಚ್ಚಿದ್ದಾರೆ. ಬಕೆಟ್ ಆಕಾರದಲ್ಲಿ ಸ್ಫೋಟಕ ವಸ್ತು ಇತ್ತು. ಅದರಲ್ಲಿ ಸಣ್ಣಸಣ್ಣ ಬಾಕ್ಸ್ ಇಡಲಾಗಿದ್ದು, ಅವುಗಳಲ್ಲಿ ನಿಂಬೆಹಣ್ಣು ತರದ ವಸ್ತು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಫೋಟಕಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದ್ದು, ಯುವಕ ಹುಸೇನ್‍ಸಾಬ್ ಅದನ್ನು ತೆಗೆಯಲು ಹೋದಾಗ ಸ್ಫೋಟವಾಗಿದೆ. ಆತನಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ವಿಜಯವಾಡದ ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆ ಬಾಕ್ಸ್ ಮೇಲೆ ಗಾರ್ಗೋಟಿ ಶಾಸಕ ಹೆಸರು ಬರೆಯಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕ ಸಾಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಪೊಲೀಸರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ತನಿಖೆ ಮಾಡುತ್ತೇವೆ. ಬಾಂಬ್ ನಿಷ್ಕ್ರಿಯ ದಳ ಹುಬ್ಬಳ್ಳಿಗೆ ಬಂದಿದ್ದು, ಬಾಂಬ್‍ಗಳನ್ನು ನಿಷ್ಕ್ರಿಯಗೊಳಿಸಲಿದ್ದಾರೆ. ಹುಬ್ಬಳ್ಳಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *