Saturday, 18th August 2018

ಅಲೆಗಳ ಹೊಡೆತಕ್ಕೆ ಮನೆ ಪೀಸ್ ಪೀಸ್ – ಅಪಾಯದ ಭೀತಿಯಲ್ಲಿ ಜನರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸಮುದ್ರ ರಾಜನ ರೌದ್ರಾವತಾರಕ್ಕೆ ಮನೆಯೊಂದು ಕೊಚ್ಚಿ ಹೋಗಿದೆ.

ಉಳ್ಳಾಲದ ಕೈಕೋದಲ್ಲಿನ ಮನೆಯೊಂದಕ್ಕೆ ರಕ್ಕಸ ಅಲೆಯೊಂದು ಹೊಡೆದ ಕಾರಣ ಜನ ನೋಡು ನೋಡುತ್ತಿದ್ದಂತೆ ಮನೆ ಕುಸಿದು ಬಿದ್ದು ಸಮುದ್ರ ಪಾಲಾಗಿದೆ. ಕಡಲ ಅಬ್ಬರವನ್ನು ಚಿತ್ರೀಕರಿಸುತ್ತಿದ್ದ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಮನೆ ಕುಸಿತದ ದೃಶ್ಯ ಸೆರೆಯಾಗಿದೆ.

ಅಷ್ಟೇ ಅಲ್ಲದೇ ಸ್ಥಳೀಯ ಸುಮಾರು 15 ಮನೆಗಳಿಗೂ ಹಾನಿಯಾಗಿದೆ. 30ರಷ್ಟು ಮನೆಗಳಿಗೆ ಸಮುದ್ರದ ಅಲೆಗಳು ನುಗ್ಗಿದ್ದು, ಉಳ್ಳಾಲದ ಕಿಲಿರಿಯಾ, ಕೈಕೋ ಪ್ರದೇಶಗಳು ಅಪಾಯದ ಭೀತಿಯನ್ನು ಎದುರಿಸುತ್ತಿದೆ.

ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಅಲ್ಲಿನ ಮಳೆ ನೀರು ನದಿಗೆ ಹರಿದು ಸಮುದ್ರ ಸೇರುತ್ತಿದೆ. ಜೊತೆಗೆ ಕಡಲ ತೀರದಲ್ಲಿ ಗಾಳಿ ಜೋರಾಗಿದ್ದರಿಂದ ಅಲೆಗಳ ಆರ್ಭಟವೂ ಹೆಚ್ಚಾಗಿದೆ. ಇದೀಗ ಕಡಲ ತೀರದ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದು ದಿನ ಸಾಗಿಸುತ್ತಿದ್ದಾರೆ.

Leave a Reply

Your email address will not be published. Required fields are marked *