Thursday, 12th December 2019

ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟ ಹಾಲಿವುಡ್ ನಟ

ಬಾಲಿ: ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಭಾರತೀಯರ ಮನ ಗೆದ್ದಿದ್ದಾರೆ.

ಕ್ರಿಸ್ ಹೆಮ್ಸ್‌ವರ್ಥ್, ಹಾಲಿವುಡ್‍ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚಿ ಎಲ್ಲೆಡೆ ಹೆಸರು ಮಾಡಿದ ನಟ. ಹಾಲಿವುಡ್ ಸ್ಟಾರ್ ಆಗಿದ್ದರು ಕೂಡ ಭಾರತದ ಮೇಲೆ ಇವರು ವಿಶೇಷ ಪ್ರೀತಿ ಇಟ್ಟಿದ್ದಾರೆ. ಹೀಗಾಗಿ ತಮ್ಮ ಮುದ್ದಿನ ಮಗಳಿಗೆ ಇಂಡಿಯಾ ರೋಸ್ ಎಂದು ಕ್ರಿಸ್ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಕ್ರಿಸ್ ಅವರೇ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ತಮ್ಮ ನೆಟ್‍ಫ್ಲಿಕ್ಸ್ ಪ್ರಾಜೆಕ್ಟ್ `ಧಾಕಾ’ದ ಶೂಟಿಂಗ್‍ಗಾಗಿ ಭಾರತಕ್ಕೆ ಬಂದಿದ್ದ ಕ್ರಿಸ್ ಇಲ್ಲಿನ ಅಹಮದಾಬಾದ್ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಸಿದ್ದರು. ಮೊದಲಿಗೆ ಭಾರತದಲ್ಲಿ ಶೂಟಿಂಗ್ ಮಾಡುವುದಕ್ಕೆ ಆತಂಕವಿತ್ತು. ಆದರೆ ನಂತರ ಇಲ್ಲಿನ ಜನರ ಜೊತೆ ಬೆರೆಯುತ್ತ ಖುಷಿಯಾಯ್ತು. ಇಲ್ಲಿನ ಜನರು ಶೂಟಿಂಗ್ ವೇಳೆ ನಮಗೆ ತೋರಿದ ಪ್ರೀತಿ, ಗೌರವ ನಿಜಕ್ಕೂ ನನಗೆ ಬಹಳ ಇಷ್ಟವಾಗಿತ್ತು ಎಂದು ಹೊಗಳಿದರು.

ನನ್ನ ಪತ್ನಿ ಎಲ್ಸಾ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಳು, ಅವಳಿಗೆ ಕೂಡ ಭಾರತ ಅಚ್ಚುಮೆಚ್ಚು ಹೀಗಾಗಿ ನಾವಿಬ್ಬರು ನಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡಲು ನಿರ್ಧರಿಸಿದೆವು ಎಂದು ತಿಳಿಸಿದರು. ಹಾಗೆಯೇ ಇದೇ ವೇಳೆ ತಮ್ಮ ಅವಳಿ ಮಕ್ಕಳಾದ ಸಾಶಾ ಹಾಗೂ ಡ್ರಿಸ್ಟನ್ ಮಗ್ಗೆ ಕೂಡ ಕ್ರಿಸ್ ಮಾತನಾಡಿದರು.

ನನಗೆ ಭಾರತ, ಅಲ್ಲಿನ ಜನರು ಮತ್ತು ಅಲ್ಲಿ ಮಾಡಿದ ಶೂಟಿಂಗ್ ತುಂಬಾ ಇಷ್ಟ. ಇಲ್ಲಿ ಪ್ರತಿನಿತ್ಯವು ನಾವು ಶೂಟಿಂಗ್ ಮಾಡುವಾಗ ಸಾವಿರಾರು ಮಂದಿ ನಿಂತು ನೋಡುತ್ತಿದ್ದರು. ಆ ರೀತಿ ಶೂಟಿಂಗ್ ಸೆಟ್‍ನಲ್ಲಿ ಜನ ಇರುವುದನ್ನ ನಾನು ಹಿಂದೆಂದೂ ನನ್ನ ಅನುಭವದಲ್ಲಿ ನೋಡಿರಲಿಲ್ಲ. ಆಗ ಸ್ವಲ್ಪ ಭಯವಾಯ್ತು ಬಳಿಕ ಜನರನ್ನು ನೋಡಿ ಖುಷಿಯಾಯ್ತು ಎಂದರು.

ಪ್ರತಿ ಭಾರಿ ಶೂಟಿಂಗ್ ಮಾಡುವ ವೇಳೆ ನಿರ್ದೇಶಕರು ಕಟ್ ಎಂದ ಕೂಡಲೇ ಎಲ್ಲಿದ್ದ ಜನರು ಜೋರಾಗಿ ಕೂಗಿ ಪ್ರೋತ್ಸಾಹಿಸುತ್ತಿದ್ದರು. ಆಗ ನಮಗೆ ನಾವು ರಾಕ್‍ಸ್ಟಾರ್ಸ್ ರೀತಿ ಸ್ಟೇಡಿಯಂ ಮಧ್ಯೆ ನಿಂತಂತೆ ಅನಿಸುತ್ತಿತ್ತು. ನಾವು ಶೂಟಿಂಗ್‍ಗಾಗಿ ಅವರ ಕೆಲಸಗಳಿಗೆ ಅಡ್ಡಿಮಾಡಿದ್ದರು ಜನರು ನಮಗೆ ಪ್ರೀತಿ, ಪ್ರೋತ್ಸಾಹ ನೀಡಿದರು. ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ ಎಂದು ಕ್ರಿಸ್ ಭಾರತ ಹಾಗೂ ಭಾರತೀಯರ ಬಗ್ಗೆ ನಮ್ಮ ಅಭಿಪ್ರಾಯ ಹಂಚಿಕೊಂಡರು.

Leave a Reply

Your email address will not be published. Required fields are marked *