Connect with us

15 ದಿನದಲ್ಲಿ 10 ಸಾವು – ಆತಂಕದಲ್ಲಿ ಚಿಕ್ಕಮಗಳೂರಿನ ಹಿರೇಮಗಳೂರು

15 ದಿನದಲ್ಲಿ 10 ಸಾವು – ಆತಂಕದಲ್ಲಿ ಚಿಕ್ಕಮಗಳೂರಿನ ಹಿರೇಮಗಳೂರು

ಚಿಕ್ಕಮಗಳೂರು: 15 ದಿನಗಳ ಅಂತರದಲ್ಲಿ 10 ಸಾವನ್ನ ಕಂಡಿರೋ ಚಿಕ್ಕಮಗಳೂರು ನಗರದ ಹಿರೇಮಗಳೂರಿನ ಜನ ಆತಂಕದಿಂದ ಬದುಕುವಂತಾಗಿದೆ. ಹಿರೇಮಗಳೂರು ಚಿಕ್ಕಮಗಳೂರಿನ ಸೆರಗಲ್ಲೇ ಇದೆ. ನಗರಸಭೆ ವ್ಯಾಪ್ತಿಗೆ ಒಳಪಡುತ್ತೆ. ನಡೆದೇ ಹೊರಟರು ನಗರಕ್ಕೆ 10 ನಿಮಿಷದ ನಡಿಗೆ. ಅಷ್ಟು ಸನಿಹದಲ್ಲಿದೆ. ಈ ಗ್ರಾಮದಲ್ಲಿ ಕಳೆದ ಹದಿನೈದೇ ದಿನದಲ್ಲಿ 10 ಜನ ಸಾವನ್ನಪ್ಪಿರೋದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಬ್ರೇಕ್ ಫೇಲ್ ಆಗಿರೋ ಕೊರೊನಾ ಹೈ ಸ್ಪೀಡಲ್ಲಿದೆ. ಜಿಲ್ಲಾದ್ಯಂತ ದಿನಂಪ್ರತಿ ನಾಲ್ಕು-ಐದು ಜನ ಸಾವನ್ನಪ್ಪುತ್ತಿದ್ದಾರೆ. ಆದರೆ ಹೀಗೆ ಒಂದೇ ಗ್ರಾಮದಲ್ಲಿ ಇಷ್ಟೊಂದು ಜನ ಎಲ್ಲೂ ಸಾವನ್ನಪ್ಪಿಲ್ಲ. ಸಾಲದಕ್ಕೆ ಹೀಗೆ ಸತ್ತವರೆಲ್ಲಾ ಕೊರೊನಾದಿಂದ ಸತ್ತಿಲ್ಲ.

ಈ ಗ್ರಾಮದಲ್ಲಿ ಕೊರೊನಾಗೆ ಬಲಿಯಾದವರು ಕೇವಲ ಮೂರು ಜನರಷ್ಟೆ. ಉಳಿದವರಿಗೆ ಸಾವಿಗೆ ಕಾರಣವೇ ಇಲ್ಲ. ಒಂದು ವೇಳೆ, ಕಾರಣ ಇದ್ದರೂ ಜನ ಅದನ್ನ ನಂಬಲು ಸಾಧ್ಯವಿಲ್ಲದಂತಹಾ ಸಾವಾಗಿದೆ. ಯಾಕೆಂದರೆ ವಾಂತಿ ಮಾಡಿಕೊಂಡೋರು ಸತ್ತಿದ್ದಾರೆ. ಅಂಗಡಿ ಬಾಗಿಲಲ್ಲಿ ಕೂತಿದ್ದ ಗಟ್ಟಿಮುಟ್ಟಾಗಿದ್ದ ಯುವಕರು ಇದ್ದಕ್ಕಿದ್ದಂತೆ ಸತ್ತಿದ್ದಾರೆ. ಹೀಗೆ ಯುವಕರು, ಮಧ್ಯವಯಸ್ಕರರು, ವೃದ್ಧರೂ ಎಲ್ಲರೂ ಸಾವನ್ನಪ್ಪಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಇನ್ನು ಉಳಿದ 7 ಮಂದಿ ಕೊರೊನಾ ಪರೀಕ್ಷೆಯನ್ನೇ ಮಾಡಿಸಿಲ್ಲ. ಗಟ್ಟಿಮುಟ್ಟಾಗಿ ಮನೆಯಲ್ಲಿ ಆರಾಮಾಗಿ ಇದ್ದವರು ಸಾವಿನ ಮನೆ ಕದ ಬಡಿಯುತ್ತಿದ್ದಾರೆ. ಅವರಿಗೆ ಕೊರೊನಾ ಲಕ್ಷಣಗಳು ಇತ್ತೋ? ಇಲ್ವೋ? ಅನ್ನೋದು ಸಾಬೀತಾಗಿಲ್ಲ. ಹೀಗೆ ಸಾವನ್ನಪ್ಪಿದವರಲ್ಲಿ ವಯಸ್ಸಾದವರು, ಮಧ್ಯ ವಯಸ್ಕರರು, ಯುವಕರೂ ಇದ್ದಾರೆ. ಒಬ್ಬರ ನಂತರ ಮತ್ತೊಬ್ಬರು ಈ ಪರಿ ಸಾವನ್ನಪ್ಪುತ್ತಿರೋದು ಸ್ಥಳೀಯರನ್ನ ಆತಂಕಕ್ಕೆ ದೂಡಿದೆ.

ವಯಸ್ಸಾದವರ ಸಾವು ಜನರನ್ನ ದುಃಖಕ್ಕೆ ದೂಡಿದ್ದರೆ, ಯುವಕರು, ಮಧ್ಯವಯಸ್ಕರ ಸಾವು ಗ್ರಾಮಸ್ಥರ ನಿದ್ದೆಗೆಡಿಸಿದೆ. 30, 36, 27, 35, 45 ವರ್ಷದವರ ಸಾಲು-ಸಾಲು ಸರಣಿ ಸಾವು ಸ್ಥಳೀಯರ ದಿಕ್ಕು ತಪ್ಪಿಸುತ್ತಿದೆ. ಜನರು ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸದಿರೋದು ಜನರ ಜೀವಕ್ಕೆ ಮಾರಕವಾಗುತ್ತಿದ್ಯಾ ಎಂಬ ಪ್ರಶ್ನೆ ಬಲವಾಗಿ ಮೂಡಿದೆ. ಜನ ಲಕ್ಷಣಗಳಿದ್ದರೂ ಮನೆಮದ್ದಿಗೆ ಆದ್ಯತೆ ನೀಡಿ ಮನೆಯಲ್ಲೇ ಇರುವುದರಿಂದ ಈ ರೀತಿ ಆಗುತ್ತಿದ್ಯಾ ಎಂಬ ಸಂಶಯವೂ ಮೂಡಿದೆ.

ಗ್ರಾಮೀಣ ಭಾಗದ ಜನ ಪಾಸಿಟಿವ್ ಬಂದರೆ ಅಕ್ಕಪಕ್ಕದವರೂ ನೋಡುವ ರೀತಿಯ ಬದಲಾಗುತ್ತೆ ಎಂದು ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಕೆಟ್ಟ ಚಾಳಿ ನಗರಕ್ಕೂ ಕಾಲಿಟ್ಟಿದ್ಯಾ ಎಂಬ ಅನುಮಾನ ಕಾಡತೊಡಗಿದ್ದು, ಜನರ ಬೇಜಾವಾಬ್ದಾರಿಯಿಂದ ಈ ರೀತಿ ಅನಾಹುತ, ದುರ್ಘಟನೆಗಳು ಸಂಭವಿಸುತ್ತಿದ್ಯಾ ಎಂಬ ಅನುಮಾನ ಕೂಡ ಮೂಡಿದೆ.