Connect with us

Karnataka

ಹೆದ್ದಾರಿ ಕಾಮಗಾರಿಗೆ ವಿರೋಧ- ಜೆಸಿಬಿಗೆ ಅಡ್ಡ ನಿಂತು ಪ್ರತಿಭಟನೆ

Published

on

ಉಡುಪಿ: ಜಿಲ್ಲೆಯ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಸಂಬಂಧಿಸಿ ಪರ್ಕಳ ಪೇಟೆಯಲ್ಲಿ ಕಟ್ಟಡ ತೆರವು ಕಾರ್ಯಕ್ಕೆ ಸ್ಥಳಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಹೆದ್ದಾರಿ ಅಧಿಕಾರಿಗಳು ಸ್ಥಳೀಯ ಅಂಗಡಿ ಮಾಲೀಕರಿಗೆ ನೋಟಿಸ್ ನೀಡದೆ, ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ತೆರವು ಕಾರ್ಯ ಆರಂಭಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂರಾರು ಮಂದಿ ಸ್ಥಳೀಯರು ಜಮಾಯಿಸಿ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡರು. ಬಳಿಕ ಮಣಿಪಾಲ ಪೊಲೀಸ್ ಸರ್ಕಲ್ ಇನ್‍ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಆಗಮಿಸಿ, ಮನವೊಲಿಸಿದರೂ ಹಿರಿಯ ಇಂಜಿನಿಯರ್ ಸ್ಥಳಕ್ಕೆ ಬರುವಂತೆ ಸ್ಥಳೀಯರು ಪಟ್ಟು ಹಿಡಿದರು.

ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಅಮೃತ್ ಶೆಣೈ ಮಾತನಾಡಿ, ಅಂಗಡಿ ಮಾಲೀಕರಿಗೆ ನೋಟಿಸ್, ಸ್ಪಷ್ಟನೆ ನೀಡದೆ ಕಟ್ಟಡ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದೇ ತೆರವಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದೇಶ ಪತ್ರ ಇಲ್ಲದೆ ಕಟ್ಟಡ ತೆರವಿಗೆ ಮುಂದಾದ ಅಧಿಕಾರಿಯನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಹಿರಿಯ ಇಂಜಿನಿರ್ ನಾಗರಾಜ್ ನಾಯ್ಕ್ ಸಂತ್ರಸ್ತರಿಗೆ ಸ್ಪಷ್ಟನೆ ನೀಡಿದರು. ತ್ರೀಡಿ ನೋಟಿಫಿಕೆಶನ್ ಬಳಿಕ ಜಾಗ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ಬಂದಂತೆ. ಇದು ಅಂತಿಮ ನೋಟಿಸ್ ಇದ್ದ ಹಾಗೆ. ಈಗಾಗಲೇ ಹಲವು ಬಾರಿ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದರು. ಬಳಿಕ ಕೆಲಕಾಲ ಸಂತ್ರಸ್ತರು ಮತ್ತು ಇಂಜಿನಿಯರ್ ನಡುವೆ ವಾಗ್ವಾದ ನಡೆಯಿತು.

ಸದ್ಯ ಕಟ್ಟಡ ತೆರವು ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಇಂದು ಶುರು ಮಾಡಿದ ಕಟ್ಟಡ ತೆರವನ್ನು ಕೆಲ ದಿನಗಳಲ್ಲಿ ತೆರವು ಮಾಡುತ್ತೇವೆ. ಸಂತ್ರಸ್ತರ ಅಂಗಡಿ, ಮುಂಗಟ್ಟು ತೆರವಿಗೆ ಒಂದು ವಾರ ಕಾಲಾವಕಾಶ ಕೊಡುತ್ತೇವೆ. ಈಗಾಗಲೆ ಖಾಲಿ ಇರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭ ಮಾಡುತ್ತೇವೆ ಎಂದು ಇಂಜಿನಿಯರ್ ತಿಳಿಸಿದರು.

Click to comment

Leave a Reply

Your email address will not be published. Required fields are marked *