Connect with us

Bengaluru City

ನಟ ಜಗ್ಗೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಿಂದ ಭಾರೀ ಆಕ್ರೋಶ!

Published

on

ಬೆಂಗಳೂರು: ನಟ ಹಾಗೂ ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯ ಜಗ್ಗೇಶ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹೊಗಳಿ ಟ್ವೀಟ್ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವೆಂಕಯನಾಯ್ಡು ಅವರು ಇದೀಗ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು ಹಿನ್ನೆಲೆಯಲ್ಲಿ ಜಗ್ಗೇಶ್ ಈ ಟ್ವೀಟ್ ಮಾಡಿ ಅಭಿನಂದಿಸಿದ್ದರು. ತಮ್ಮ ಟ್ವೀಟ್ ನಲ್ಲಿ ಕರ್ನಾಟಕದಲ್ಲಿ ಅವರನ್ನು ಭಾಷಾಭಾವನೆಯಲ್ಲಿ ರಾಜ್ಯ ಸಭೆಗೆ ಆಕ್ಷೇಪಿಸಿದರು. ಆದರೆ ಇಂದು ಭಾರತಕ್ಕೆ ಉಪರಾಷ್ಟ್ರಪತಿ! ಬಾರದು ಬಪ್ಪುದು, ಬಪ್ಪುದು ತಪ್ಪದು ಇದೇ ದೇವರ ಲೀಲೆ ಅಂತ ಬರೆದುಕೊಂಡಿದ್ದರು.

ಇದೀಗ ಜಗ್ಗೇಶ್ ಅವರು ಪರೋಕ್ಷವಾಗಿ ಕನ್ನಡಿಗರಿಗೆ ಅಪಮಾನವಾಗುವ ರೀತಿ ಟ್ವೀಟ್ ಮಾಡಿದ್ದಾರೆ ಅಂತ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ವಿವಾದಾತ್ಮಕ ಟ್ವೀಟ್ ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಗ್ಗೇಶ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಕನ್ನಡಿಗರ ವಿರೋಧ ಯಾಕೆ?: ರಾಜ್ಯಸಭೆಯ ಚುನಾವಣೆ ವೇಳೆ ಬಿಜೆಪಿ ಈ ಬಾರಿ ಮತ್ತೊಮ್ಮೆ ಕರ್ನಾಟಕದಿಂದ ವೆಂಕಯ್ಯ ನಾಯ್ಡು ಅವರನ್ನು ಕಳುಹಿಸಲು ಮುಂದಾಗಿತ್ತು. ಆದರೆ ಈ ಹಿಂದೆ ಎರಡೂ ಬಾರಿ ರಾಜ್ಯದಿಂದ ಆಯ್ಕೆ ಆಗಿದ್ದರೂ ರಾಜ್ಯಕ್ಕೆ ಏನು ಕೆಲಸ ಮಾಡಿಲ್ಲ ಎಂದು ಕನ್ನಡಿಗರು ಮತ್ತೊಮ್ಮೆ ಆರಿಸಿ ಕಳುಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ `ವೆಂಕಯ್ಯ ಸಾಕಯ್ಯ’ ಅನ್ನೋ ಅಭಿಯಾನ ನಡೆಸಿದ್ದರು. ಈ ವೇಳೆ ಕನ್ನಡಪರ ಧ್ವನಿ ಎತ್ತದೆ, ಕನ್ನಡ ಪರ ಕೆಲಸ ಮಾಡದ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ವೆಂಕಯ್ಯ ನಾಯ್ಡುಗೆ ರಾಜ್ಯಸಭೆ ಟಿಕೆಟ್ ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ರಾಜ್ಯದ ಜನರ ಅಭಿಪ್ರಾಯಕ್ಕೆ ಬಿಜೆಪಿ ಮಣಿದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಿದ್ದರೆ, ವೆಂಕಯ್ಯ ನಾಯ್ಡು ಅವರಿಗೆ ರಾಜಸ್ಥಾನದಲ್ಲಿ ಟಿಕೆಟ್ ನೀಡಿತ್ತು. ಈ ವಿಚಾರವನ್ನು ನೆನಪಿಸಿಕೊಂಡು ನಟ ಜಗ್ಗೇಶ್ ಈ ಟ್ವೀಟ್ ಮಾಡಿದ್ದರು.

ದೇಶದ 15ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ ಆಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು 272 ಮತಗಳ ಅಂತರದಿಂದ ಸೋಲಿಸುವ ಮೂಲಕ ಈ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದಾರೆ. ಒಟ್ಟು 785 ಮತದಾರರ ಪೈಕಿ ಬಿಜೆಪಿ ಇಬ್ಬರು ಸೇರಿ 14 ಮಂದಿ ಮತ ಹಾಕಿಲ್ಲ. ಶೇಕಡವಾರು ಲೆಕ್ಕದಲ್ಲಿ ನೋಡೋದಾದ್ರೆ 98.21ರಷ್ಟು ಮತದಾನ ಆಗಿತ್ತು. ಒಟ್ಟು ಮತಗಳ ಶೇ. 68 ರಷ್ಟು ಅಂದ್ರೆ 516 ಸಂಸದರು ಎನ್‍ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಪರ ಮತ ಚಲಾಯಿಸಿದ್ರೆ, ಶೇ. 32ರಷ್ಟು ಅಂದ್ರೆ 244 ಮಂದಿ ಸಂಸದರು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಪರ ಮತ ಚಲಾಯಿಸಿದ್ದಾರೆ.