Monday, 20th August 2018

ಬೀದರ್ ನಲ್ಲಿ ಭಾರೀ ಮಳೆ: ಸಂಪರ್ಕ ಕಳೆದುಕೊಂಡು ಒದ್ದಾಡುತ್ತಿದ್ದಾರೆ ಗ್ರಾಮಸ್ಥರು

ಬೀದರ್: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಔರಾದ್ ತಾಲೂಕಿನ ಗ್ರಾಮದಲ್ಲಿ ನಿರ್ಮಾಣ ಹಂತದ ಸೇತುವೆಯ ಪಕ್ಕ ಹಾಕಲಾಗಿದ್ದ ತಾತ್ಕಾಲಿಕ ಸೇತುವೆಯೊಂದು ಕೊಚ್ಚಿ ಹೋಗಿದೆ.

ನಿಡೋದಾ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿದ್ದ ಸೇತುವೆ ಕೊಚ್ಚಿ ಹೋದ ಪರಿಣಾಮ 2 ಸಾವಿರಕ್ಕೂ ಹೆಚ್ಚು ಜನ ವಸತಿ ಇರುವ ಗ್ರಾಮ ಈಗ ಸಂಪರ್ಕ ಕಳೆದುಕೊಂಡಿದೆ.

ನಿಡೋದಾ ಗ್ರಾಮದ ಬಳಿ ಮಂಜ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿದ್ದರಿಂದ ಮಂಜ್ರಾ ನದಿ ನೀರಿನ ಪ್ರಮಾಣ ಹೆಚ್ಚಾಗಿ ತಡರಾತ್ರಿ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಸುಮಾರು 2000 ಜನವಸತಿ ಹೊಂದಿರುವ ನಿಡೋದಾ ಗ್ರಾಮವು ತಡರಾತ್ರಿಯಿಂದ ಸಂಪರ್ಕ ಕಳೆದುಕೊಂಡಿದೆ. ಈ ಗ್ರಾಮಕ್ಕೆ ಈ ದಾರಿ ಹೊರತು ಪಡಿಸಿ ಯಾವುದೇ ಅನ್ಯ ದಾರಿಗಳಿಲ್ಲದ್ದರಿಂದ ಸಂಚಾರ ಇಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ.

ಗ್ರಾಮಸ್ಥರು ಊರಿಂದ ಹೊರಗೆ ಮತ್ತು ಒಳಗೆ ಬಾರದಂತಹ ಅಸಹಾಯಕ ಸ್ಥಿತಿ ಎದುರಾಗಿದೆ. ಗ್ರಾಮಸ್ಥರು ಮಳೆ ಅವಾಂತರದಿಂದ ಒದ್ದಾಡುತ್ತಿದ್ದರೂ, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಇವರೆಲ್ಲರೂ  ಪರಿಷತ್ ಚುನಾವಣೆಯಲ್ಲಿ ಬ್ಯುಸಿ ಆಗಿರುವುದುದರಿಂದ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *