Connect with us

Bengaluru City

ಬೆಂಗ್ಳೂರು ಸೇರಿ ರಾಜ್ಯಾದ್ಯಂತ ವರುಣನ ಅಬ್ಬರ – ಕಲಬುರಗಿಯಲ್ಲಿ ಮಳೆಗೆ ಯುವತಿ ಬಲಿ

Published

on

– ಎಲ್ಲೆಲ್ಲಿ ಮಳೆ..? ಏನೇನಾಗಿದೆ..?

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಡೀ ರಾತ್ರಿ ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್‍ನಿಂದ ಸೋಮವಾರ ಬೆಳಗ್ಗೆಯಿಂದ ಜಿಟಿಜಿಟಿ ಮಳೆ ಶುರುವಾಗಿತ್ತು. ಸಂಜೆಯಾಗುತ್ತಿದ್ದಂತೆಯೇ ಮಳೆಯ ಅಬ್ಬರ ಜೋರಾಯ್ತು.

ಬೆಂಗಳೂರಿನ ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಹೆಬ್ಬಾಳ, ಮತ್ತಿಕೆರೆ, ಬಿಇಎಲ್ ಸರ್ಕಲ್, ಮಹಾಲಕ್ಷ್ಮಿಲೇಔಟ್, ಜಾಲಹಳ್ಳಿ ಕ್ರಾಸ್ ಸೇರಿ ಹಲವೆಡೆ ಮಳೆ ಅಬ್ಬರ ಜೋರಾಗಿತ್ತು. ಧಾರಾಕಾರ ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದವು. ವಾಹನ ಸವಾರರು ಪರದಾಡಿದರು. ಇನ್ನೂ 3 ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಲಬುರಗಿಯ ಸಾಲಹಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಯುವತಿ ಸಾವನ್ನಪ್ಪಿದ್ದಾರೆ. 19 ವರ್ಷದ ಸಂಗೀತಾ ಮೃತ ದುರ್ದೈವಿ. ಮನೆಯಿಂದ ಹೊರಗಿದ್ದ ಸಂಗೀತಾ ತಂದೆ-ತಾಯಿ ಬಚಾವ್ ಆಗಿದ್ದಾರೆ. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ, ಆದಿ ಸುಬ್ರಹ್ಮಣ್ಯ ದೇಗುಲ ಸಂಪೂರ್ಣ ಮುಳುಗಡೆಯಾಗಿವೆ. ದೇಗುಲದೊಳಕ್ಕೆ ನೀರು ನುಗ್ಗಿ ಭಕ್ತರು ಪರದಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ನಗರದಲ್ಲಿ ಒಂದು ಗಂಟೆ ಕಾಲ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿ ನೀರು ರಸ್ತೆಗಳಿಗೆ ನುಗ್ಗಿದ್ದು ವಾಹನ ಸವಾರರ ಪರದಾಡಿದರು. ತುಮಕೂರಿನ ಶೆಟ್ಟಿಹಳ್ಳಿ ಅಂಡರ್ ಪಾಸ್ ಈಜು ಕೊಳವಾಗಿ ಮಾರ್ಪಟ್ಟಿದೆ. ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ನೆಲಮಂಗಲದಲ್ಲೂ ಭಾರೀ ಮಳೆಯಿಂದ ದರ್ಗಾ ಮಸೀದಿಯ ಕಾಂಪೌಂಡ್ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಾಮರಾಜನಗರದಲ್ಲಿ ಭಾರೀ ಮಳೆಗೆ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ರಾಮನಗರದ ಚನ್ನಪಟ್ಟಣದಲ್ಲಿ ಚರಂಡಿ ಅವ್ಯವಸ್ಥೆಯಿಂದ ಎಪಿಎಂಸಿ ಕ್ವಾಟ್ರಸ್ ಬಳಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿವೆ. ಬಳ್ಳಾರಿಯಲ್ಲಿ ಧಾರಾಕಾರ ಮಳೆಯಿಂದ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಕಮ್ಮರಚೇಡ್‍ನಲ್ಲಿ ಹಳ್ಳ ತುಂಬಿ ಹರಿದು ಜಮೀನುಗಳಿಗೆ ನುಗ್ಗಿದೆ. ಹತ್ತಿ, ಭತ್ತ, ಮೆಣಸಿನಕಾಯಿ ಬೆಳೆ ನೀರುಪಾಲಾಗಿದೆ. ಶಾಲಾ ಕೊಠಡಿಗಳು ಜಲಾವೃತಗೊಂಡು ದಾಖಲೆಗಳು ನಾಶವಾಗಿವೆ.