Connect with us

Bengaluru City

ರಾಜ್ಯದಲ್ಲಿ ಭಾರೀ ಮಳೆ – ರಸ್ತೆಗೆ ಬಂತು ಸಿಂಟೆಕ್ಸ್ ಟ್ಯಾಂಕ್, ಸಿಡಿಲಿಗೆ ನಾಲ್ವರು ಸಾವು

Published

on

ಬೆಂಗಳೂರು: ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಒಂದು ಎತ್ತು ಹಾಗೂ ನಾಲ್ಕು ಜನ ರೈತರು ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗಲಲ್ಲು ಗಟ್ಟಿಯ ರೈತ ಬಾಲಜ್ಜರ ಚಂದ್ರಪ್ಪ (55), ಯಾದಗಿರಿ ಜಿಲ್ಲೆಯ ಗುರುಮೀಠಕಲ್ ತಾಲೂಕಿನ ಮಧ್ವಾರ ಗ್ರಾಮದ ಶೇಖರ ಪೂಜಾರಿ (35) ಹಾಗೂ ಶೇಖರ ಚೌಕಿದಾರ (34), ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ತಳವಾಡಕೆ ಗ್ರಾಮದ ಮಾದಪ್ಪ (55) ಸಿಡಿಲಿಗೆ ಬಲಿಯಾಗಿದ್ದಾರೆ.

ಬಿಸಿಲಿನಿಂದ ಕಂಗೆಟ್ಟ ದಾವಣಗೆರೆ ಜನತೆಗೆ ವರುಣ ತಂಪು ಎರೆದಿದ್ದಾನೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮಳೆಯ ಸಿಂಚನವಾಗಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಿದೆ. ಆದರೆ ಜಗಳೂರು ತಾಲೂಕಿನ ಅಣಬೂರು ಗಲಲ್ಲುಗಟ್ಟಿ ಗ್ರಾಮದ ಕಣದಲ್ಲಿ ಕೆಲಸ ಮಾಡುತ್ತಿದ್ದ ಬಾಲಜ್ಜರ ಚಂದ್ರಪ್ಪ (55) ಸಿಡಿಲು ಬಡಿದು ಪ್ರಾಣ ಬಿಟ್ಟಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಬೀದರ್ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾಲ್ಕಿ ತಾಲೂಕಿನ ತಳವಾಡಕೆ ಗ್ರಾಮದ ಮಾದಪ್ಪ ಅವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಟಪಟ್ಟಿದ್ದಾರೆ. ಅವರ ಜೊತೆಗಿದ್ದ ಒಂದು ಎತ್ತು ಕೂಡ ಸಾವನ್ನಪ್ಪಿದೆ. ಮೃತ ಮಾದಪ್ಪ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭಾಲ್ಕಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ವಿವಿಧೆಡೆ ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಿದೆ. ಗುರುಮೀಠಕಲ್ ತಾಲೂಕಿನ ಮಧ್ವಾರ ಗ್ರಾಮದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಶೇಖರ ಪೂಜಾರಿ ಹಾಗೂ ಶೇಖರ ಚೌಕಿದಾರ ಮೃತಪಟ್ಟಿದ್ದಾರೆ. ಮತ್ತೊರ್ವ ಗಾಯಾಳನ್ನು ಸೈದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಪ್ಪಿದ ಭಾರೀ ಅನಾಹುತ:
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಭೀಕರ ಗಾಳಿ ಸಮೇತ ಮಳೆಯಾಗಿದೆ. ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀದಪ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ನೀರಿನ ಸಿಂಟೆಕ್ಸ್ ಟ್ಯಾಂಕ್ ಗಳು ಗಾಳಿಯ ವೇಗಕ್ಕೆ ಹಾರಿ ಹೋಗಿ ರಸ್ತೆ ಬೀಳುತ್ತಿದ್ದವು. ಇದೇ ವೇಳೆ ಅಂಗಡಿಯ ಮುಂದೆ ಚಲಿಸುತ್ತಿದ್ದ ಬೈಕ್‍ಗೆ ಸಿಂಟೆಕ್ಸ್ ಅಪ್ಪಳಿಸಿದ ಪರಿಣಾಮ ಸವಾರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲಿಯೇ ಸಮೀಪದಲ್ಲಿ ನಿಂತಿದ್ದ ವ್ಯಕ್ತಿಗೆ ಮೂರು ಸಿಂಟೆಕ್ಸ್ ಟ್ಯಾಂಕ್ ಗಳು ವೇಗವಾಗಿ ಬಂದು ಅಪ್ಪಳಿಸಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಕೊಡಗು ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಅಬ್ಬರ ಜೋರಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ದ್ವಿಚಕ್ರ ವಾಹನ ಸವಾರರು, ಜನಸಾಮಾನ್ಯರ ಪರದಾಡಿದ್ದಾರೆ.

ಬಿಸಿಲನಾಡಿಗೆ ತಂಪೆರೆದ ವರುಣ:
ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಬಳ್ಳಾರಿಯ ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದ ಬಳಿ ಆಲಿಕಲ್ಲು ಮಳೆಯಾಗಿದ್ದು ಗದ್ದೆ ಹಾಗೂ ಮನೆಯ ಅಂಗಳದಲ್ಲಿ ಮುತ್ತಿನ ರಾಶಿಯಂತೆ ಬಿದ್ದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದೆ. ಗಾಳಿಯ ಹೊಡೆತಕ್ಕೆ ಕುಷ್ಟಗಿ ಹೊರವಲಯದ ಟೋಲ್ ಗೇಟ್ ಕಿತ್ತುಹೋಗಿದೆ. ಇದರಿಂದಾಗಿ ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿ ಸವಾರರು ಪರದಾಡುವಂತಾಯಿತು. ವಿಜಯಪುರ ಜಿಲ್ಲೆಗೂ ವರುಣನ ಸಿಂಚನವಾಗಿದೆ.