Sunday, 24th March 2019

Recent News

ಉಡುಪಿ, ಹಾವೇರಿ, ಧಾರವಾಡದಲ್ಲಿ ಭಾರೀ ಮಳೆ

ಉಡುಪಿ/ಹಾವೇರಿ/ಧಾರವಾಡ: ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿದೆ.

ಉಡುಪಿಯಲ್ಲಿ ಭಾರೀ ಗಾಳಿ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಗುಡುಗು ಸಹಿತವಾಗಿ ಧಾರಾಕಾರ ವರ್ಷಧಾರೆ ಸುರಿಯುತ್ತಿದೆ. ಬಿರುಸಿನ ಮಳೆಯಿಂದ ವಾತಾವರಣ ಬಹಳ ತಂಪಾಗಿದೆ. ವಾಯುಭಾರ ಕುಸಿತದಿಂದ ತೂಫಾನ್ ಆಗುತ್ತೆ ಅಂತ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿತ್ತು. ಆದರೆ ಇಲಾಖೆ ಹೇಳಿದ ವಾರದ ನಂತರ ಅಬ್ಬರದ ಮಳೆ ಸುರಿಯುತ್ತಿದೆ. ನಗರದಾದ್ಯಂತ ವಾಹಸ ಸಂಚಾರ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಆಗುತ್ತಿದ್ದು, 7 ತಾಲೂಕುಗಳಲ್ಲೂ ಮಳೆ ಸುರಿಯುತ್ತಿದೆ. ಕಾರ್ಕಳ – ಹೆಬ್ರಿ ತಾಲೂಕಿನಲ್ಲಿ ಮಿಂಚು ಸಿಡಿಲು ಸಹಿತ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು, ನಾಳೆಯೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಇನ್ನೆರಡು ದಿನ ಮಳೆ ಆಗಲಿದೆ. ವಾರದ ಹಿಂದೆ ತೂಫಾನ್ ಎಚ್ಚರಿಕೆ ನೀಡಿದ್ದರೂ ಬಿರುಸಿನ ಮಳೆ ಆಗಿರಲಿಲ್ಲ. ಈಗ ಭಾರೀ ಮಳೆ ಬೀಳುತ್ತಿದೆ. ಭತ್ತ ಕಟಾವಿಗೆ ಬಂದಿದ್ದು ಮಳೆ ಮುಂದುವರೆದರೆ ಬೆಳೆ ಹಾನಿಯಾಗುವ ಸಾಧ್ಯತೆ ಇದೆ.

ಧಾರವಾಡದಲ್ಲಿಯೂ ಬೆಳಗ್ಗಿನಿಂದಲೇ ದಟ್ಟವಾದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆಯಾಗುತ್ತಲೇ ಗುಡುಗು ಸಹಿತ ಭಾರೀ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಹರಸಾಹಸ ಪಟ್ಟ ಮಾಹಿತಿಗಳು ಲಭ್ಯವಾಗಿವೆ.

ಹಾವೇರಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಹಾವೇರಿ ನಗರ ಸೇರಿದಂತೆ, ರಾಣೆಬೆನ್ನೂರು, ಬ್ಯಾಡಗಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಸುಮಾರು ಅರ್ಧ ಗಂಟೆಯಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ರಸ್ತೆಯಲ್ಲಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಹಿಂಗಾರು ಬಿತ್ತನೆಗಾಗಿ ಕಾದು ಕುಳಿತಿದ್ದ ರೈತರ ಮೊಗದಲ್ಲಿ ಮಾತ್ರ ಮಳೆರಾಯ ಮಂದಹಾಸ ಮೂಡಿಸಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *