Connect with us

Bengaluru City

ಮಳೆಯ ಆರ್ಭಟಕ್ಕೆ 7 ಸಾವಿರ ಕೋಳಿ ಸಾವು

Published

on

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಮೀರ್ಲಗೊಂದಿ ಗ್ರಾಮದ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನೀರು ನುಗ್ಗಿ 7,000 ಸಾವಿರ ಕೋಳಿಗಳು ಸಾವನ್ನಪ್ಪಿವೆ.

ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಿರ್ಲಗೊಂದಿಯ ನರಸಿಂಹಯ್ಯ ಎಂಬವರಿಗೆ ಸೇರಿದ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನೀರು ನುಗ್ಗಿ 7,000 ಕೋಳಿಗಳು ಸಾವನ್ನಪ್ಪಿದ್ದು, ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. 5 ಲಕ್ಷ ರೂ. ಸಾಲ ಪಡೆದು ನಿರ್ಮಾಣ ಮಾಡಿದ್ದ ಕೋಳಿ ಸಾಕಾಣಿಕೆ ಶೆಡ್ ಸಂಪೂರ್ಣ ಹಾಳಾಗಿದ್ದು, ಇದರೊಂದಿಗೆ ಕೋಳಿಗಳ ಸಾವಿನಿಂದ ರೈತ ಕಂಗಾಲಾಗಿದ್ದಾರೆ. ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿದ್ದು, ಸಹಾಯಕ್ಕಾಗಿ ತಾಲೂಕು ಆಡಳಿತದ ಮೊರೆ ಹೋಗಿದ್ದಾರೆ.

ಇನ್ನೂ ಮೂರು ದಿನ ಮಳೆ:
ಸಿಲಿಕಾನ್ ಸಿಟಿ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಹಳದಿ ಅಲರ್ಟ್ ನಂತೆಯೇ ಮಳೆರಾಯ ಗುಡುಗು-ಮಿಂಚಿನಿಂದ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಲ್ಲೇಶ್ವರಂ, ಯಶವಂತಪುರ, ಕಾರ್ಪೊರೇಷನ್, ಗೊರಗುಂಟೆಪಾಳ್ಯ, ವಿಧಾನಸೌಧ, ರಾಜಕುಮಾರ್ ಸಮಾಧಿ ರೋಡ್, ಸುಂಕದಕಟ್ಟೆ, ಬಿಇಎಲ್ ಸರ್ಕಲ್ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಆನೇಕಲ್‍ನಲ್ಲೂ ಮಳೆ ಅಬ್ಬರಿಸಿದೆ. ಸಂಜೆ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು. ಕಳೆದ 4 ದಿನಗಳಿಂದ ಸುರಿಯುತ್ತಿರುವ ಸಂಜೆ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.

ಬೆಂಗಳೂರಷ್ಟೇ ಅಲ್ಲ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದ್ದು, ಕಲಬುರಗಿ, ಯಾದಗಿರಿಯಲ್ಲಿ ಸಿಡಿಲಿಗೆ ದಂಪತಿ ಸೇರಿ ಮೂವರು ಬಲಿಯಾಗಿದ್ದಾರೆ. ಹಾವೇರಿಯ ಹಾನಗಲ್‍ನಲ್ಲಿ ಮೂವರು ಶಾಲಾ ವಿದ್ಯಾರ್ಥಿನಿಯರು ಚರಂಡಿಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಎಲ್ಲರನ್ನು ರಕ್ಷಿಸಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮಳೆ ಆಗುತ್ತಿದೆ. ಸುಮಾರು 7 ಸೆಂ.ಮೀ.ನಿಂದ 11 ಸೆಂ.ಮೀ.ನಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 21ರವರೆಗೆ ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.